HEALTH TIPS

ಹದಿಹರೆಯದ ಸಂಬಂಧಗಳ ಸ್ವರೂಪ ನಿರ್ಣಯಿಸುವ ಸಮ್ಮತಿ ವಯಸ್ಸು: ಮಾಹಿತಿ ಕೋರಿದ ಆಯೋಗ

              ವದೆಹಲಿ: ಸಮ್ಮತಿಯ ವಯಸ್ಸಿನ ಪುನರ್‌ ಪರಿಶೀಲನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿದ 22ನೇ ಕಾನೂನು ಆಯೋಗವು ಈ ಬಗ್ಗೆ ವಿವರಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

              ನ್ಯಾಯಮೂರ್ತಿ (ನಿವೃತ್ತ) ಋತು ರಾಜ್ ಅವಸ್ಥಿ ಅವರ ನೇತೃತ್ವದ ಕಾನೂನು ಆಯೋಗವು ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಮ್ಮತಿಯ ವಯಸ್ಸಿನ ಮಾನದಂಡದ ವಿಷಯದ ಬಗ್ಗೆ ಕೆಲವು ಮಾಹಿತಿಯನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.

              'ನಾವು ಈ ವಿಷಯದ ಬಗ್ಗೆ ಗಮನ ಹರಿಸಿದ್ದೇವೆ. ಕೆಲವು ಮಾಹಿತಿಯನ್ನು ಒದಗಿಸಲು ನಾವು ಕಾನೂನು ಆಯೋಗದ ಸದಸ್ಯರೊಂದಿಗೆ ಸಭೆ ನಡೆಸಿದ್ದೇವೆ' ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

                  18ಕ್ಕಿಂತ ಕಡಿಮೆ ವಯಸ್ಸಿನವರನ್ನು ಮಕ್ಕಳು ಎಂದು ವ್ಯಾಖ್ಯಾನಿಸುವ, ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ (ಪೋಕ್ಸೊ) ಕಾಯ್ದೆ ಮತ್ತು ಹದಿಹರೆಯದವರ ನಡುವಿನ ಸಂಬಂಧಗಳ ಸ್ವರೂಪ ನಿರ್ಣಯಿಸುವಲ್ಲಿನ ಸಮ್ಮತಿಯ ವಯಸ್ಸಿನ ಗೊಂದಲ ಹಲವು ವರ್ಷಗಳಿಂದ ಇದೆ. ಪೋಕ್ಸೊ ಕಾಯ್ದೆ ಅಡಿಯಲ್ಲಿನ ಸಮ್ಮತಿಯ ವಯಸ್ಸಿನ ಮಾನದಂಡದ ಬಗ್ಗೆ ಕಾನೂನು ಆಯೋಗ ಮರುಚಿಂತನೆ ನಡೆಸುವ ಅಗತ್ಯವಿರುವುದಾಗಿ ಹೈಕೋರ್ಟ್‌ ನ್ಯಾಯಪೀಠಗಳು ಅಭಿಪ್ರಾಯಪಟ್ಟಿದ್ದವು.

                      ಪೊಕ್ಸೊ ಕಾಯ್ದೆಯ ಹಿಂದಿನ ಉದ್ದೇಶ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವುದಾಗಿದೆ. ಹಾಗಂಥ, ಯುವ ವಯಸ್ಕರ ನಡುವಿನ ಸಮ್ಮತಿಯ ಪ್ರಣಯ ಸಂಬಂಧಗಳನ್ನು ಅಪರಾಧೀಕರಣಗೊಳಿಸುವುದಲ್ಲ ಎಂದು ದೆಹಲಿ ಹೈಕೋರ್ಟ್‌ ಕಳೆದ ವರ್ಷ ಅಭಿಪ್ರಾಯಪಟ್ಟಿತ್ತು.

17 ವರ್ಷದ ಬಾಲಕಿಯನ್ನು ವಿವಾಹವಾಗಿ, ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಬಾಲಕನಿಗೆ ಜಾಮೀನು ನೀಡುವಾಗ ಹೈಕೋರ್ಟ್‌ ನ್ಯಾಯಪೀಠವು ಈ ಮಾತು ಹೇಳಿತ್ತು.

                ಪೋಕ್ಸೊ ಪ್ರಕರಣವೊಂದರಲ್ಲಿ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವು, 'ಹದಿನಾರು ವರ್ಷ ದಾಟಿದ ಬಾಲಕಿಯರು ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಮನೆಬಿಟ್ಟು ಓಡಿ ಹೋಗುವ ಮತ್ತು ಲೈಂಗಿಕ ಸಂಪರ್ಕ ಹೊಂದುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಬಾಲಕಿಯರ ಲೈಂಗಿಕ ಸಂಪರ್ಕದ ವಯೋಮಿತಿಯ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಮತ್ತು ವಾಸ್ತವ ಸಂಗತಿಗಳ ಆಧಾರದಲ್ಲಿ ಈ ನಿಟ್ಟಿನಲ್ಲಿ ಮರುಚಿಂತನೆ ನಡೆಸಬೇಕು' ಎಂದು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries