ಪೆರ್ಲ: ಬಜಕೂಡ್ಲು ಬಯಲಲ್ಲಿ ಆ. 13ರಂದು ನಡೆಯಲಿರುವ ಅಮೃತದೀಪ 'ಕೆಸರ್‍ಕಂಡ ಉಚ್ಚಯ' ಕಾರ್ಯಕ್ರಮದ ಯಶಸ್ವಿಗಾಗಿ ಸಮಾಲೋಚನಾ ಸಭೆ ಭಾನುವಾರ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜರುಗಿತು. ಸಮಾಜದ ಅಶಕ್ತ ಜನತೆಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಅಮೃತದೀಪ ಸಂಘಟನೆ ಕಾರ್ಯಾಚರಿಸುತ್ತಿದ್ದು, ಎರಡನೇ ವರ್ಷದ ಕೆಸರುಗದ್ದೆ ಉತ್ಸವ ಆಯೋಜಿಸಲಾಗುತ್ತಿದೆ.
ಅಮೃತದೀಪ ಉತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕುದ್ವ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕೆಸರುಗದ್ದೆ ಉತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಅತಿಥಿಗಳ ಆಹ್ವಾನ, ಆಹಾರ ವಿತರಣೆ, ಗದ್ದೆ ಹದಗೊಳಿಸುವಿಕೆ, ವೇದಿಕೆ-ಚಪ್ಪರ ನಿರ್ಮಾಣ ಕುರಿತು ವಿವಿಧ ಸಮಿತಿಗಳಿಗೆ ರೂಪುನೀಡಲಾಯಿತು. ಸಭೆಯಲ್ಲಿ ಅಮೃತದೀಪ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕೆಸರ್‍ಕಂಡ ಉಚ್ಚಯ ಸಮಿತಿ, ಉಪ ಸಮಿತಿಗಳ ಸದಸ್ಯರು ಪಾಲ್ಗೊಒಡಿದ್ದರು.
ಗ್ರಾಮೀಣ ಸೊಗಡು ಮೈಗೂಡಿಸಿಕೊಂಡು ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಕೆಸರಿನಲ್ಲಿ ಓಟ, ಹಗ್ಗಜಗ್ಗಾಟ, ಮಡಕೆ ಒಡಯುವುದು, ವಾಲಿಬಾಲ್, ಸಂಗೀತಕುರ್ಚಿ, ಹಾಳೆ ಎಳೆಯುವುದು ಸೇರಿದಂತೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.





