ತಿರುವನಂತಪುರಂ: ಕೇರಳೀಯ ಯುವಕನೊಬ್ಬ 43,000 ಅಡಿ ಎತ್ತರದಲ್ಲಿ ವಿಮಾನದಿಂದ ಸ್ಕೈಡೈವಿಂಗ್ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಘಟನೆ ಅಮೆರಿಕದ ಟೆನ್ನೆಸ್ಸೀ ರಾಜ್ಯದಲ್ಲಿ ನಡೆದಿದೆ.
ವಿಶ್ವ ದಾಖಲೆಯನ್ನು ಕೋಝಿಕ್ಕೋಡ್‍ನ ಬಲುಶೇರಿ ಪನೈ ಮೂಲದ ಜಿತಿನ್ ವಿಜಯನ್ ದಾಖಲಿಸಿದ್ದಾರೆ. ಕಳೆದ ಜುಲೈ 1 ರಂದು ಜಿತಿನ್ ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಸ್ಕೈಡೈವ್ ಮಾಡಿದರು. ಜಿತಿನ್ ಕೈಯಲ್ಲಿ ರಾಷ್ಟ್ರಧ್ವಜ ಕಟ್ಟಿಕೊಂಡು 43,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ ಸಾಧನೆ ಮೆರೆದಿರುವರು.
41 ವರ್ಷದ ಜಿತಿಲ್ 43,000 ಅಡಿ ಎತ್ತರದಿಂದ ಭೂಮಿಯನ್ನು ಸ್ಪರ್ಶಿಸಲು ತೆಗೆದುಕೊಂಡ ಸಮಯ ಏಳು ನಿಮಿಷಗಳು. ಇದರಲ್ಲಿ ಮೂರು ನಿಮಿಷಗಳು ಮುಕ್ತ ಪತನವಾಗಿತ್ತು. 5500 ಅಡಿ ಎತ್ತರದಿಂದ ಪ್ಯಾರಾಚೂಟ್ ಅನ್ನು ಎತ್ತಿದ ನಾಲ್ಕು ನಿಮಿಷಗಳ ನಂತರ ಲ್ಯಾಂಡ್ ಆದರು.
ಅವರು ಎರ್ನಾಕುಳಂನಲ್ಲಿರುವ ಐಟಿ ಕಂಪನಿಯಾದ ಎನ್ ಡೈಮೆನ್ಷನ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‍ನ ಸಿಇಒ ಆಗಿದ್ದಾರೆ. ಬಾಲ್ಯದಿಂದಲೂ ಜಿತಿನ್‍ನಲ್ಲಿ ಹಾರುವ ಆಸೆ ಹುಟ್ಟಿಕೊಂಡಿತ್ತು. ಈ ರೀತಿಯ ಹಾರಾಟವು ಅವರನ್ನು ಪ್ಯಾರಾಗ್ಲೈಡಿಂಗ್‍ಗೆ ಕರೆತಂದಿತು. ಇದಾದ ನಂತರ ಸ್ಕೈಡೈವಿಂಗ್ ಕಡೆಗೆ ಹೆಜ್ಜೆ ಹಾಕಿದರು.
ಜಿತಿನ್ ಸ್ಪೇನ್‍ನಿಂದ ಎ ಗ್ರೇಡ್ ಪರವಾನಗಿ ಪಡೆದಿದ್ದಾರೆ. ದುಬೈ, ಅಬುಧಾಬಿ ಮತ್ತು ಯುಕೆಯ ಸ್ಕೈಡೈವಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದಾರೆ. ಪನೈ ಮೂಲದ ವಿಜಯನ್ ಮತ್ತು ಸತ್ಯಭಾಮಾ ದಂಪತಿಯ ಪುತ್ರರಾಗಿದ್ದಾರೆ ಜಿತಿನ್.





