ಮಂಜೇಶ್ವರ: ಜಿಲ್ಲೆಯಲ್ಲಿ ಜೂನ್ ತಿಂಗಳ ಅತ್ಯುತ್ತಮ ಪೋಲೀಸ್ ಠಾಣೆಯಾಗಿ ಮಂಜೇಶ್ವರ ಹಾಗೂ ಅತ್ಯುತ್ತಮ ಪೋಲೀಸ್ ಅಧಿಕಾರಿಯಾಗಿ ಮಂಜೇಶ್ವರ ಠಾಣಾ ಎಸ್‍ಸಿಪಿಒ ಪ್ರದೀಶ್ ಗೋಪಾಲ್ ಆಯ್ಕೆಯಾಗಿರುವರು. ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆಯಲ್ಲಿ ಪ್ರಭಾಕರ ನೋಂಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸಹೋದರ ಸೇರಿದಂತೆ ಆರು ಮಂದಿಯನ್ನು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿರುವುದು, ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಎಂಡಿಎಂಎ ಮಾದಕ ದ್ರವ್ಯ ವಶಪಡಿಸಿಕೊಂಡಿರುವುದು ಮತ್ತು ಠಾಣೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಮಂಜೇಶ್ವರ ಅತ್ಯುತ್ತಮ ಠಾಣೆಯಾಗಿ ಆಯ್ಕೆಯಾಗಿದೆ. ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್ ಅವರ ನಿಖರ ಮಧ್ಯಸ್ಥಿಕೆ ಹಾಗೂ ಮಂಜೇಶ್ವರ ಠಾಣೆಯ ಪೋಲೀಸರ ಪರಿಶ್ರಮ ಈ ಸಾಧನೆಯ ಹಿಂದಿದೆ.
ಜಿಲ್ಲಾ ವಿಶೇಷ ಶಾಖೆಯ ಮಂಜೇಶ್ವರ ಕ್ಷೇತ್ರಾಧಿಕಾರಿ ಎಸ್‍ಸಿಪಿಒ ಪ್ರದೀಶ್ ಗೋಪಾಲ್ ಅವರನ್ನು ಉತ್ತಮ ಅಧಿಕಾರಿಯಾಗಿ ಪುರಸ್ಕ್ಕರಿಸಿದರು. ಬೋರ್‍ವೆಲ್ ಗುತ್ತಿಗೆದಾರ ಥಾಮಸ್ ಕ್ರಾಸ್ತಾ ಎಂಬಾತನನ್ನು ಬದಿಯಡ್ಕ ಸೀತಾಂಗೋಳಿಯಲ್ಲಿ ಕೊಲೆ ಮಾಡಿದವರನ್ನು ಅಲ್ಪಾವಧಿಯಲ್ಲಿಯೇ ಪತ್ತೆ ಹಚ್ಚಲು ಪ್ರಮುಖ ಮಾಹಿತಿ ನೀಡಿದವರು ಪ್ರದೇಶ್. ಅಲ್ಲದೆ, ಪ್ರದೇಶ್ ನೀಡಿದ ರಹಸ್ಯ ಮಾಹಿತಿ ಮೇರೆಗೆ ಜಿಲ್ಲೆಯಾದ್ಯಂತ ದೊಡ್ಡ ಮತ್ತು ಸಣ್ಣ ಪ್ರಮಾಣದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು, ಕುಂಬಳೆ, ಮಂಜೇಶ್ವರ ಮತ್ತು ಚಂದೇರ ಠಾಣೆಗಳಲ್ಲಿ ಹಲವಾರು ವಾಣಿಜ್ಯ ಪ್ರಮಾಣದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೋಲೀಸ್ ಮುಖ್ಯಸ್ಥ ಡಾ.ವೈಭವ್ ಸಕ್ಸೇನಾ, ಹೆಚ್ಚುವರಿ ಎಸ್ಪಿ ವಿ.ಶ್ಯಾಮ್ ಕುಮಾರ್ ಮತ್ತು ಜಿಲ್ಲೆಯ ಡಿವೈಎಸ್ಪಿಗಳನ್ನೊಳಗೊಂಡ ಸಮಿತಿಯು ಆಯ್ಕೆ ಮಾಡಿದೆ.
ನೆರೆಯ ಕರ್ನಾಟಕದೊಂದಿಗೆ ಹೆಚ್ಚು ಗಡಿಗಳನ್ನು ಹೊಂದಿರುವ ಮಂಜೇಶ್ವರ ಠಾಣಾ ವ್ಯಾಪ್ತಿ ವಿಶಾಲವಾದುದು. ತಲಪ್ಪಾಡಿ, ಆನೆಕಲ್ಲು, ಮೊರತ್ತಣೆ, ಬೇಡಗುಡ್ಡೆ, ಮುಗುಳಿ, ಬೆರಿಪದವು, ಬಳ್ಳೂರು ಪ್ರದೇಶಗಳು ಮಂಜೇಶ್ವರ ವ್ಯಾಪ್ತಿಯ ಅಂತರ್ ರಾಜ್ಯ ಗಡಿಗಳಾಗಿವೆ. ಗ್ರಾಮೀಣ ಪ್ರದೇಶವಾದ ಈ ಗಡಿ ಗ್ರಾಮಗಳ ಮೂಲಕ ಶಾಂತಿ-ಸಮಾಧಾನ ನಿರ್ವಹಣೆಗಳ ಹೊಣೆಗೆ ಈ ಪ್ರಶಸ್ತಿಗಳು ಹುಡುಕಿಬಂದಿದೆ.





