ಕಾಸರಗೋಡು: ಗಡಿನಾಡ ಕನ್ನಡಿಗರ ಹಿತರಕ್ಷಣೆ ನಿಟ್ಟಿನಲ್ಲಿ ಲೋಕಸೇವಾ ಆಯೋಗದ ಕಾಸರಗೋಡು ಕಚೇರಿಗೆ ಮುತ್ತಿಗೆ ನಡೆಸಿದ ಪ್ರಕರಣದಲ್ಲಿ ಬಿಜೆಪಿ ರಾಜ್ಯದ್ಯಕ್ಷ ಕೆ. ಸುರೇಂದ್ರನ್ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರದರು. ಪಿಎಸ್‍ಸಿ ಪರೀಕ್ಷೆಯಲ್ಲಿ ಮಲಯಾಳ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗಾಗುತ್ತಿರುವ ಅನ್ಯಾಯ ವಿರೋಧಿಸಿ 2013 ಜೂ. 8ರಂದು ಪಿಎಸ್‍ಸಿ ಕಾಸರಗೋಡು ಕಚೇರಿಗೆ ಬಿಜೆಪಿ ವತಿಯಿಂದ ಮುತ್ತಿಗೆ ಹಾಕಲಾಗಿತ್ತು. ಅಂದು ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ. ಸುರೇಂದ್ರನ್ ಧರಣಿ ಉದ್ಘಾಟಿಸಿ ಕಚೇರಿ ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.
ಭಾಷಾ ಅಲ್ಪಸಂಖ್ಯತರಾಗಿರುವ ಗಡಿನಾಡ ಕನ್ನಡಿಗರಿಗೆ ಸಂವಿಧಾನಾತ್ಮಕ ಸವಲತ್ತು ಒದಗಿಸಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದಾಗಿ ಕೆ. ಸುರೇಂದ್ರನ್ ದೂರಿದ್ದು, ಈ ಸಂದರ್ಭ ಸರ್ಕಾರದ ಅದೇಶದ ಪ್ರತಿಗಳನ್ನು ಕಚೇರಿಯೊಳಗೆ ಹರಿದು ಹಾಕಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಂದು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನ್ಯಾಯಾಲಯ ಸುರೇಂದ್ರನ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 25ಕ್ಕೆ ಮುಂದೂಡಿದೆ.
ಕೆಎಸ್‍ಇಬಿ, ಕೆಎಸ್‍ಎಫ್‍ಇ ಸೇರಿದಂತೆ ವಿವಿಧ ಇಲಾಖೆಗಳ ಅಸಿಸ್ಟೆಂಟ್ ಗ್ರೇಡ್-2 ಪರೀಕ್ಷೆಗಾಗಿ ಪಿಎಸ್‍ಸಿ ತೀರ್ಮಾನಿಸಿದ್ದು, ಇದರಲ್ಲಿ ಮಲಯಾಳ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಪಿಎಸ್‍ಸಿ ಕಚೇರಿ ಮುತ್ತಿಗೆ ಪ್ರತಿಭಟನೆ ಅಯೋಜಿಸಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಅಂದು ಮುಂದೂಡಬೇಕಾಗಿ ಬಂದಿತ್ತು.




