ಕಾಸರಗೋಡು: ಜಿಲ್ಲೆಯ ಸ್ಥಳೀಯ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೌಲ್ಯಮಾಪನಕ್ಕೆ ಪಂಚಾಯಿತಿ ಭೇಟಿ ಅಂಗವಾಗಿ ವೆಸ್ಟ್ ಎಳೇರಿ ಗ್ರಾ.ಪಂ.ಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮತ್ತು ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಮೋಹನನ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮೋಳಿಕುಟ್ಟಿ ಪೌಲ್, ಕೆ.ಕೆ. ತಂಗಚ್ಚನ್, ಗ್ರಾಪಂ ಸದಸ್ಯರಾದ ಇ.ಟಿ.ಜೋಸ್, ಟಿ.ವಿ.ರಾಜೀವನ್, ಲಿಲ್ಲಿಕುಟ್ಟಿ, ಟಿ.ಎ.ಜೇಮ್ಸ್, ಸಿ.ಪಿ.ಸುರೇಶನ್, ಮೊಹಮ್ಮದ್ ಷರೀಫ್ ವಾಯಪಲ್ಲಿ, ಎಂ.ವಿ.ಲಿಜಿನಾ, ರೈಹಾನತ್, ಎಸ್ಟಿ ಪ್ರಮೋಟರ್ ರತೀಶ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿ.ಕೆ.ಪಂಕಜಾಕ್ಷನ್ ಸ್ವಾಗತಿಸಿದರುನಂತರ ಸಾರ್ವಜನಿಕ ಪ್ರತಿನಿಧಿಗಳು ಮತ್ತು ನೌಕರರೊಂದಿಗೆ ಜಿಲ್ಲಾಧಿಕಾರಿ ಸಂವಾದ ನಡೆಸಿದರು.
ಈ ಸಂದರ್ಭ ನಿವೇಶನ ರಹಿತರಿಗೆ ಭೂಮಿಯ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪೆರುಂಬಟ್ಟ ಜಿಎಲ್‍ಪಿ ಶಾಲೆ, ವಾಜಪಲ್ಲಿ, ಚಟ್ಟಮಾಲಾ ಮತ್ತು ಕೂರಂಕುಂಡ್ ಅಂಗನವಾಡಿಗಳಿಗೆ ಹೊಸ ಕಟ್ಟಡದ ಅವಶ್ಯಕತೆ ಬಗ್ಗೆ ಜಿಲ್ಲಾಧಿಕಾರಿಗೆ ಸಭೆಯಲ್ಲಿ ಮನವರಿಕೆ ಮಾಡಲಾಯಿತು. ನೀಲವ್ ಯೋಜನೆ ಹಾಗೂ ಜಲಜೀವನ ಮಿಷನ್ ಯೋಜನೆ ಶೀಘ್ರ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ ಉಪಸ್ಥಿತರಿದ್ದರು. ಪೆರಳಂ ಅಂಗನವಾಡಿಗೆ ನೆಲಮಟ್ಟಕ್ಕಿಂತ ಎತ್ತರದ ರಕ್ಷಣಾ ಗೋಡೆ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿವಿಧ ತೂಗು ಸೇತುವೆಗಳ ದುರಸ್ತಿ ಕಾಮಗಾರಿಗೆ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಹಣ ಸೇರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಂತರ ಅಪಾಯದ ಭೀತಿಯಲ್ಲಿರುವ ಭೀಮನಡಿಯ ತೂಗು ಸೇತುವೆಗೆ ಭೇಟಿ ನೀಡಿದರು. ಸೇತುವೆ ನವೀಕರಣದ ಬಗ್ಗೆ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.





