ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಮತ್ತು ದೇರಳಕಟ್ಟೆಯ ಜುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ, ಯೆನೆಪೋಯ ದಂತ ಕಾಲೇಜು ಮತ್ತು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಸಹಯೋಗದಲ್ಲಿ ಕೊಂಡೆವೂರು ಮಠದ ವಿಂಶತಿ ಕಾರ್ಯಕ್ರಮದ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಭಾನುವಾರ ಕೊಂಡೆವೂರು ಮಠದಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಚಾಲನೆ ನೀಡಿ, ಆರೋಗ್ಯಪೂರ್ಣ ಜೀವನಕ್ಕೆ ಉತ್ತಮಪರಿಸರ ಸಂರಕ್ಷಿಸಿ ಬೆಳೆಸುವ ತುರ್ತು ಇಂದಿದೆ. ನಿಜವಾದ ಮಾನವೀಯತೆಯೊಂದಿಗೆ ಮಾನವ ಧರ್ಮದಲ್ಲಿ ಬಾಳಬೇಕು ಎಂದರಲ್ಲದೆ ಯೆನೆಪೋಯ ಸಂಸ್ಥೆಗಳ ಸೇವಾಕೈಂಕರ್ಯವನ್ನು ಶ್ಲಾಘಿಸಿದರು.
ಟ್ರಸ್ಟಿ, ಮುಂಬೈ ಉದ್ಯಮಿ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶಿಬಿರ ದೀಪಪ್ರಜ್ವಲನೆಗೈದು ಉದ್ಘಾಟಿಸಿ, ಆರೋಗ್ಯವೇ ಐಶ್ವರ್ಯ ಎಂದು ನುಡಿದರು. ಮುಖ್ಯ ಅತಿಥಿಗಳಾದ ಯೆನೆಪೋಯ ಒಂಕಾಲಜಿ ವಿಭಾಗ ಮುಖ್ಯಸ್ಥ ಡಾ.ರಾಜೇಶ್ ಕೃಷ್ಣ ಹಾಗೂ ಶಿಶುರಕ್ತ ವಿಜ್ಞಾನ ವಿಭಾಗದ ಡಾ.ಅನೂಷಾ ಹೆಗ್ಡೆ ಕ್ಯಾನ್ಸರ್ ಖಾಯಿಲೆಯನ್ನು ಹೇಗೆ ಚಿಕಿತ್ಸೆ ಮಾಡಿ ಗುಣಪಡಿಸಬಹುದು ಎಂದು ವಿವರಿಸಿದರು. ಟ್ರಸ್ಟಿ ಶಶಿಧರ ಶೆಟ್ಟಿ ಗ್ರಾಮಚಾವಡಿ ಮತ್ತು ಯೆನೆಪೋಯ ಸಮುದಾಯ ದಂತವಿಭಾಗದ ಪ್ರಾಧ್ಯಾಪಕಿ ಡಾ. ಪ್ರಮದಾ ಪ್ರಭಾಕರ್ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಮಾಜಿ ಎಂ.ಎಲ್.ಸಿ, ಟ್ರಸ್ಟಿ ಮೋನಪ್ಪ ಭಂಡಾರಿ ಅವರು ಉತ್ತಮ ಆರೋಗ್ಯವಂತರಾಗಿ ಬಾಳುವುದರಲ್ಲಿ ಕೈಗೊಳ್ಳಬೇಕಾದ ಜೀವನಕ್ರಮ, ಚಿಕಿತ್ಸಾ ವಿಧಾನಗಳ ಅರಿವು ವಿಸ್ತಾರವಾಗಿರಬೇಕು ಎಂದರು.
ಗಂಗಾಧರ ಕೊಂಡೆವೂರು ಸ್ವಾಗತಿಸಿದರು. ಸದಾಶಿವ ಮೋಂತಿಮಾರು ಸ್ವಾಗತಿಸಿ, ದಿನಕರ ಹೊಸಂಗಡಿ ವಂದಿಸಿದರು. ಅನಿಲ್ ಕೊಂಡೆವೂರು ಪ್ರಾರ್ಥನೆಗೈದರು.
ಕೊಂಡೆವೂರು ಮಠದ ಆರೋಗ್ಯ ವಿಭಾಗದ ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ದಂತಚಿಕಿತ್ಸೆ, ಮಹಿಳಾ ಸ್ವಾಸ್ಥ್ಯ ಚಿಕಿತ್ಸೆ, ಕ್ಯಾನ್ಸರ್ ವಿಭಾಗದಲ್ಲಿ 250ಕ್ಕೂ ಹೆಚ್ಚು ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡಕೊಂಡರು.




.jpg)
.jpg)
