ಕೊಚ್ಚಿ: ಕೃತಕ ಬುದ್ಧಿಮತ್ತೆ(ಎ.ಐ.) ಬಳಸಿ ನ್ಯಾಯಾಲಯದ ಆದೇಶಗಳನ್ನು ಮಲಯಾಳಂ ಭಾಷೆಗೆ ಭಾಷಾಂತರಿಸಲು ಹೈಕೋರ್ಟ್ ನಿರ್ಣಾಯಕ ಹೆಜ್ಜೆ ಇಟ್ಟಿದೆ.
ಕೇರಳ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಂಗದ 5,503 ಆದೇಶಗಳು ಇನ್ನು ಮಲಯಾಳಂನಲ್ಲಿಯೂ ಲಭ್ಯವಿರುತ್ತವೆ. ಸ್ಥಳೀಯ ಭಾಷೆಗಳಲ್ಲೂ ಆದೇಶಗಳು ಲಭ್ಯವಾಗುವಂತೆ ಸುಪ್ರೀಂ ಕೋರ್ಟ್‍ನ ನಿರ್ದೇಶನದ ಅನುಷ್ಠಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್‍ನ ರಿಜಿಸ್ಟ್ರಾರ್ ಮಾಹಿತಿ ನೀಡಿದರು.
317 ಹೈಕೋರ್ಟ್ ಆದೇಶಗಳು ಮತ್ತು 5,000 ಕ್ಕೂ ಹೆಚ್ಚು ಜಿಲ್ಲಾ ನ್ಯಾಯಾಲಯದ ಆದೇಶಗಳನ್ನು ಮಲಯಾಳಂಗೆ ಅನುವಾದಿಸಿ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ನ್ಯಾಯಾಲಯದ ಆದೇಶಗಳನ್ನು ವ್ಯಾಪಕವಾಗಿ ಪ್ರಸಾರ ಮಾಡುವ ಮೂಲಕ ಹೆಚ್ಚಿನ ಜನರಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ.
ಕೃತಕ ಬುದ್ಧಿಮತ್ತೆ (ಎ.ಐ.) ಸಹಾಯದ ಅನುವಾದವನ್ನು ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ನೇತೃತ್ವದ ಸಮಿತಿಯ ಮಾರ್ಗದರ್ಶನದಲ್ಲಿ ಪ್ರಕಟಿಸಲಾಗಿದೆ. ಎಐಸಿಟಿಇ ಅಭಿವೃದ್ಧಿಪಡಿಸಿದ ಅನುವಾದಿನಿ ಸಾಫ್ಟ್‍ವೇರ್ ಬಳಸಿ ಅನುವಾದ ಮಾಡಲಾಗಿದೆ. ನ್ಯಾಯ ವ್ಯವಸ್ಥೆಯ ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ನ್ಯಾಯವನ್ನು ಒದಗಿಸುವುದು ಹೊಸ ಕ್ರಮದ ಉದ್ದೇಶವಾಗಿದೆ.





