ಕಾಸರಗೋಡು: 2024ರ ಅಂತ್ಯದೊಳಗೆ ರಾಜ್ಯದಲ್ಲಿ 100 ಸೇತುವೆಗಳ ಕಾಮಗಾರಿಯನ್ನು ಸರ್ಕಾರ ಪೂರ್ಣಗೊಳಿಸಲಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ.
ಅವರು ತ್ರಿಕರಿಪುರ ಕಡೆಂಜಿಮೂಲೆ- ಮಟ್ಟುಮ್ಮಲ್ ಸೇತುವೆ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಹೆದ್ದಾರಿ ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಶೇ.25ರಷ್ಟು ಭೂಸ್ವಾಧೀನಕ್ಕಾಗಿ 5600 ಕೋಟಿ ರೂ. ಮೊತ್ತವನ್ನು ಕೇರಳ ಸರ್ಕಾರ ವೆಚ್ಚಮಾಡಿದೆ ಎಂದು ತಿಳಿಸಿದರು.
ತ್ರಿಕ್ಕರಿಪುರ ಶಾಸಕ ಎಂ ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ, ವಾರ್ಡ್ ಕೌನ್ಸಿಲರ್‍ಗಳಾದ ಎನ್.ಕೆ.ವಿನಯರಾಜ್, ರಫೀಕ್ ಕೊಟ್ಟಾಪುರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ. ಬಾಲಕೃಷ್ಣನ್ ಮಾಸ್ಟರ್ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎಂ.ರಾಜನ್, ಪಿ.ವಿಜಯಕುಮಾರ್, ಇ.ಎಂ.ಕುಟ್ಟಿ ಹಾಜಿ, ಸಿ.ವಿ.ಸುರೇಶ್, ಕೆ.ಸಿ.ಪೀಟರ್, ಖಾಲಿದ್ ಕೊಳವಯಲ್, ಕರೀಂ ಚಂತೇರ, ಡೆಟೊ ಜೋಸೆಫ್, ಕೈಪ್ರತ್ ಕೃಷ್ಣನ್ ನಂಬಿಯಾರ್, ಶಂಸುದೀನ್ ಅರಿಂಚಿರ, ಸನ್ನಿ ಅರಮನೆ, ಎಂ.ಜೆ.ಜಾಯ್, ರಾಜೀವನ್ ಮತ್ತು ಸಿ.ಎಸ್.ಥಾಮಸ್ ಮಾತನಾಡಿದರು. . ಲೋಕೋಪಯೋಗಿ ಸೇತುವೆಗಳ ವಿಭಾಗ (ಕಣ್ಣೂರು) ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಂ.ಹರೀಶ್ ವರದಿ ವಾಚಿಸಿದರು. ಸೇತುವೆಗಳ ವಿಭಾಗದ ಅಧೀಕ್ಷಕ ಅಭಿಯಂತೆ ಪಿ.ಕೆ.ರಮಾ ಸ್ವಾಗತಿಸಿದರು. ಸೇತುವೆಗಳ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿಐ ಸೆಬಾಸ್ಟಿಯನ್ ವಂದಿಸಿದರು.
ಕಡೆಂಜಿಮೂಲೆ- ಮಟ್ಟುಮ್ಮಲ್ ಸೇತುವೆಯನ್ನು 13.92 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 11.14 ಕೋಟಿ ನಬಾರ್ಡ್ ಮತ್ತು 2.78 ಕೋಟಿ ರೂ. ರಾಜ್ಯ ಸರ್ಕಾರದ ಪಾಲು ಒಳಗೊಂಡಿದೆ. ಸೇತುವೆಯನ್ನು 155 ಮೀಟರ್ ಉದ್ದ ಮತ್ತು 11 ಮೀಟರ್ ಅಗಲಕ್ಕೆ ವಿನ್ಯಾಸಗೊಳಿಸಲಾಗಿದ್ದು, 350 ಮೀಟರ್ ಅಪೆÇ್ರೀಚ್ ರಸ್ತೆ ನಿರ್ಮಿಸಲಾಗುವುದು. ಸೇತುವೆ ಪೂರ್ಣಗೊಂಡರೆ, ಕಟಿಂಜಿಮುಲಾ ಮಟ್ಟುಮ್ಮಲ್ ಪ್ರದೇಶದಲ್ಲಿರುವವರಿಗೆ ನೀಲೇಶ್ವರಂ ನಗರಕ್ಕೆ ಏಳು ಕಿಲೋಮೀಟರ್ ದೂರ ಕಡಿಮೆಯಾಗಲಿದೆ.


