ಕಾಸರಗೋಡು: ಜಿಲ್ಲೆಯಲ್ಲಿ'ಮಿಷನ್ ಇಂದ್ರಧನುಷ್' ಲಸಿಕಾ ಯಜ್ಞದ ಮೂಲಕ ಎರಡು ವರ್ಷದವರೆಗಿನ 2598 ಮಕ್ಕಳು ಹಾಗೂ ಎರಡರಿಂದ ಐದು ವರ್ಷದೊಳಗಿನ 2126 ಮಕ್ಕಳು ಒಳಗೊಂಡಂತೆ ಒಟ್ಟು 4724 ಮಂದಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಜಿಲ್ಲಾ ವಾರ್ತಾ ಮತ್ತು ಮಾಹಿತಿ ಇಲಾಖೆಯ ಪಿಆರ್‍ಡಿ ಚೇಂಬರ್‍ನಲ್ಲಿ ಲಸಿಕಾ ಅಬೀಯಾನದ ಬಗ್ಗೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಇದರೊಂದಿಗೆ 1105 ಗರ್ಭಿಣಿಯರಿಗೂ ಲಸಿಕೆ ನೀಡಲಾಗುವುದು. ಆಗಸ್ಟ್ 7 ರಿಂದ ಅಕ್ಟೋಬರ್ 14 ರವರೆಗೆ ಮೂರು ಹಂತಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ.
ಮೊದಲ ಹಂತ ಆಗಸ್ಟ್ 7 ರಿಂದ 12 ರವರೆಗೆ, ಎರಡನೇ ಹಂತ ಸೆಪ್ಟೆಂಬರ್ 11 ರಿಂದ 16 ರವರೆಗೆ ಮತ್ತು ಮೂರನೇ ಹಂತ ಅಕ್ಟೋಬರ್ 9 ರಿಂದ 14 ರವರೆಗೆ ನಡೆಯಲಿದೆ. ವ್ಯಾಕ್ಸಿನೇಷನ್ ಯಜ್ಞದಲ್ಲಿ ಇತರ ರಾಜ್ಯಗಳ ಕಾರ್ಮಿಕರ ಮಕ್ಕಳು ಮತ್ತು ಪತ್ನಿಯರನ್ನೂ ಒಳಪಡಿಸಲಾಗಿದೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಲಸಿಕೆಯನ್ನು ಬಲಪಡಿಸುವ ಉದ್ದೇಶದಿಂದ 2014 ರಲ್ಲಿ ಮಿಷನ್ ಇಂದ್ರಧನುಷ್ ಅನ್ನು ಪ್ರಾರಂಭಿಸಲಾಗಿದೆ. ಯಾವುದೇ ಕಾರಣಕ್ಕೂ ಲಸಿಕೆ ಹಾಕದ ಅಥವಾ ಭಾಗಶಃ ಮಾತ್ರ ಲಸಿಕೆ ಹಾಕಿಸಿಕೊಂಡಿರುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕುವ ನಿಟ್ಟಿನಲ್ಲಿ 'ಮಿಷನ್ ಇಂದ್ರಧನುಷ್-5.0' ರಾಜ್ಯದ ಎಲ್ಲ 14ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸಂಭಾವ್ಯ ರೋಗ ಮತ್ತು ಮರಣವನ್ನು ಕಡಿಮೆ ಮಾಡಲು ಮಿಷನ್ ಇಂದ್ರಧನುಷ್ ಅನುಷ್ಠಾನಗೊಳಿಸಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕದ ಅಥವಾ ಯಾವುದೇ ಲಸಿಕೆಗಳಿಂದ ಹೊರಗುಳಿದಿರುವ ಐದು ವರ್ಷದೊಳಗಿನ ಮಕ್ಕಳನ್ನು ತಪಾಸಣೆ ನಡೆಸಲಿದ್ದಾರೆ.
ವ್ಯಾಕ್ಸಿನೇಷನ್ ಮೂಲಕ ತೀವ್ರ ಕ್ಷಯ, ಹೆಪಟೈಟಿಸ್ ಬಿ, ಡಿಫ್ತೀರಿಯಾ, ನಾಯಿಕೆಮ್ಮು, ಅತಿಸಾರ, ಧನುರ್ವಾಯು, ದಡಾರ, ಹಿಮೋಫಿಲಸ್, ಇನ್ಫ್ಲುಯೆನ್ಸ ಟೈಪ್ ಬಿ, ರುಬೆಲ್ಲಾ, ಜಪಾನೀಸ್ ಜ್ವರ, ನ್ಯುಮೋಕೊಕಲ್ ನ್ಯುಮೋನಿಯಾ ಮುಮತಾದ ರೋಗಗಳನ್ನು ತಡೆಗಟ್ಟಬಹುದಾಗಿದೆ.
ಲಸಿಕೆ ಅಭಿಯಾನದ ವಿರುದ್ಧ ಸುಳ್ಳು ಪ್ರಚಾರ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಟಿ.ಪಿ.ಅಮೀನಾ, ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಟತ್ತಿಲ್, ಡಿ.ಪಿ.ಎಚ್.ಎನ್. ಎಂ.ಗೀತಾ ಉಪಸ್ಥಿತರಿದ್ದರು.


