ಕಾಸರಗೋಡು: ಜಿಲ್ಲೆಯ ಪೆರಿಯ ನವೋದಯ ಶಾಲಾ ಮೈದಾನದಲ್ಲಿ ಜರುಗಿದ ದಕ್ಷಿಣ ಭಾರತದ ನವೋದಯ ವಿದ್ಯಾಲಯಗಳ ಪ್ರಾದೇಶಿಕ ಬ್ಯಾಸ್ಕೆಟ್‍ಬಾಲ್ ಸ್ಪರ್ಧೆಗಳು ಮುಕ್ತಾಯಗೊಂಡಿದ್ದು, ಕಡಪಾ ಕ್ಲಸ್ಟರ್ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಿಮಾನ್ ಸಮಾರೋಪ ಸಮಾರಂಭ ಉದ್ಘಾಟಿಸಿದರು. ನವೋದಯ ಪ್ರಾಂಶುಪಾಲ ವಿಜಯ ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.ನವೋದಯ ವಿದ್ಯಾಲಯ ಸಮಿತಿ, ಹೈದರಾಬಾದ್ ಪ್ರದೇಶದ ಅಧೀನದಲ್ಲಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ಮತ್ತು ಲಕ್ಷದ್ವೀಪ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಉತ್ತರ ಕೆನರಾ, ಪೂರ್ವ ಗೋದಾವರಿ, ಬೆಂಗಳೂರು ಗ್ರಾಮಾಂತರ, ಕಡಪ, ಬೀದರ್, ಎರ್ನಾಕುಲಂ ಮತ್ತು ಪಾಲಕ್ಕಾಡ್‍ನ ಕ್ಲಸ್ಟರ್‍ಗಳು ಸ್ಪರ್ಧಿಸಿದ್ದು, ಎರ್ನಾಕುಲಂ ಕ್ಲಸ್ಟರ್ ದ್ವಿತೀಯ ಸ್ಥಾನ ಪಡೆಯಿತು. ನವೋದಯ ವಿದ್ಯಾಲಯದ 2ನೇ ಬ್ಯಾಚ್ ಹಳೇ ವಿದ್ಯಾರ್ಥಿಗಳ ಸಂಘ ನೂತನವಾಗಿ ನಿರ್ಮಿಸಿರುವ ಕ್ರೀಡಾ ಭವನವನ್ನು ಮಾಜಿ ಕ್ರೀಡಾ ಶಿಕ್ಷಕ ಪಿ.ಜೆ.ಜೋಸೆಫ್ ಉದ್ಘಾಟಿಸಿದರು. ಹಿಂದಿನ ಕ್ರೀಡಾ ಶಿಕ್ಷಕರಿಗೆ ಉಡುಗೊರೆಯಾಗಿ, ಹಳೇ ವಿದ್ಯಾರ್ಥಿಗಳು ಒಳಾಂಗಣ ಕ್ರೀಡಾಂಗಣವಾಗಿ ಬಳಸಬಹುದಾದ ಕ್ರೀಡಾ ಸಭಾಂಗಣವನ್ನು ನಿರ್ಮಿಸಿ ಒದಗಿಸಿದ್ದಾರೆ. ವಿವಿಧ ರಾಜ್ಯಗಳ ಹಳೇ ವಿದ್ಯಾರ್ಥಿಗಳು, ಪಿಟಿಸಿ ಸದಸ್ಯರು ಹಾಗೂ ಕ್ರೀಡಾ ಪಟುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.


