ತಿರುವನಂತಪುರ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿದ್ದ ಡಾ. ವಂದನಾ ದಾಸ್ ಅವರನ್ನು ಚಾಕುವಿನಿಂದ ಇರಿದು ಕೊಂದ ಪ್ರಕರಣದಲ್ಲಿ ಆರೋಪಿ ಹಾಗೂ ಶಿಕ್ಷಕ ಜಿ.ಸಂದೀಪ್ ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ನೆಡುಂಬನ ಯು.ಪಿ. ಶಾಲಾ ಶಿಕ್ಷಕನಾಗಿದ್ದ ಈತನನ್ನು ಶಿಸ್ತು ಕ್ರಮದ ಭಾಗವಾಗಿ ವಜಾಗೊಳಿಸಲಾಗಿದೆ ಎಂದು ಸಚಿವ ಶಿವಂಕುಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂದೀಪ್ ಎಂಬ ಶಿಕ್ಷಕನ ಹೇಯ ಕೃತ್ಯಗಳು ಮತ್ತು ವರ್ತನೆಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಳಂಕ ಬರುವಂತೆ ಮಾಡಿದ್ದು, ಇಡೀ ಶಿಕ್ಷಕ ಸಮುದಾಯಕ್ಕೆ ಕಳಂಕ ತಂದಿರುವುದು ತನಿಖಾ ವರದಿಯಲ್ಲಿ ಕಂಡು ಬಂದಿದೆ ಎಂದು ಸಚಿವರು ಹೇಳಿದರು. ಸಂದೀಪ್ ಕುಡಿತದ ಚಟಕ್ಕೆ ಬಿದ್ದಿರುವುದು ಕೆಇಆರ್ ಗೆ ಮನವರಿಕೆಯಾಗಿದ್ದು, ವ್ಯಸನಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಅಧ್ಯಾಯ 14ಎ ನಿಯಮ 65 (7)ರ ಅಡಿಯಲ್ಲಿ ಆತನನ್ನು ವಜಾಗೊಳಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಮೇ 10ರ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಸಂದೀಪ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.





