ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು, ರ‍್ಯಾಲಿಗಳನ್ನು ನಡೆಸುವುದು ಕೇವಲ ತಮಾಷೆಯಷ್ಟೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಪ್ರಾಮಾಣಿಕ ಮಾತುಕತೆ ನಡೆಯದಿದ್ದರೆ ಕಾಶ್ಮೀರದ ಸಮಸ್ಯೆಗಳು ಬಗೆಹರಿಯಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷರೂ ಆಗಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಗಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ತಿರಂಗಾ ರ‍್ಯಾಲಿ ಆಯೋಜಿಸಿದ್ದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆಯೇ ಎನ್ನುವ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ಈಗಾಗಲೇ ಸಾಕಷ್ಟು ಪ್ರದರ್ಶನಗಳು ನಡೆದಿವೆ. ಉಭಯ ರಾಷ್ಟ್ರಗಳ ಹೃದಯ ಶುದ್ಧಿಯಾಗಿರಬೇಕು. ಪ್ರಾಮಾಣಿಕ ಉದ್ದೇಶ ಇಲ್ಲದ ಮಾತುಕತೆಯಿಂದ ಪ್ರಯೋಜನವಾಗದು ಎಂದು ಅವರು ಹೇಳಿದ್ದಾರೆ.
'ಕಾಶ್ಮೀರ ಸಮಸ್ಯೆ ಬಗ್ಗೆ ಉಭಯ ರಾಷ್ಟ್ರಗಳು ಪ್ರಾಮಾಣಿಕತೆಯಿಂದ ಮಾತನಾಡದ ಹೊರತು ಈ ತಮಾಷೆಗಳು ನಡೆಯುತ್ತಿರುತ್ತವೆ. ಇದು ಪ್ರತೀ ವರ್ಷ ನಡೆಯಬಹುದು. ಆದರೆ ಸಮಸ್ಯೆಗಳು ಹಾಗೆ ಉಳಿಯಲಿದೆ' ಎಂದು ಅವರು ನುಡಿದಿದ್ದಾರೆ.
ಅಲ್ಲದೆ ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎನ್ನುವ ಕೇಂದ್ರ ಸರ್ಕಾರದ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, 'ಯಾಕೆ ಇನ್ನೂ ಭಯೋತ್ಪಾದನೆ ಇದೆ. ಗುಂಡುಗಳು ಹಾರುತ್ತಿರುವುದೇಕೆ? ಜನರು ಹಾಗೂ ಯೋಧರು ಸಾಯುತ್ತಿರುವುದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
'ನಿಜವಾಗಿಯೂ ಕಾಶ್ಮೀರದಲ್ಲಿ ಶಾಂತಿಯ ಪರಿಸ್ಥಿತಿ ಇದ್ದರೆ ಇವೆಲ್ಲಾ ಯಾಕಾಗಬೇಕು? ಯಾಕೆಂದರೆ ಕಾಶ್ಮೀರದ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಪಾಕಿಸ್ತಾನ ನಂಬಿದೆ. ಕೇವಲ ಮಾತುಕತೆಯಿಂದ ಶಾಂತಿ ಸಾಧ್ಯ ಎನ್ನುವುದು ಅವರಿಗೆ ಮನವರಿಕೆ ಮಾಡುವವರು ಯಾರು? ಎಂದು ಪ್ರಶ್ನಿಸಿದ್ದಾರೆ.