ಕಾಸರಗೋಡು: ಸ್ವಾತಂತ್ರ್ಯದ ಆಜಾದಿ ಕಾ ಅಮೃತ ಮಹೋತ್ಸವ 75ನೇ ವಾರ್ಷಿಕೋತ್ಸವದ ಅಂಗವಾಗಿ 'ಮೇರಿ ಮಿಟ್ಟಿ ಮೇರಾ ದೇಶ್'- ನನ್ನ ಮಣ್ಣು ನನ್ನ ದೇಶ ಎಂಬ ಸಮಗ್ರ ಕಾರ್ಯಕ್ರಮಕ್ಕೆ ಪುತ್ತಿಗೆ ಅನೋಡಿಪಳ್ಳದ ವಠಾರದಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಚಾಲನೆ ನೀಡಿದರು. ಪ್ರಕೃತಿರಮಣೀಯ ಪ್ರದೇಶ ಅನೋಡಿಪಳ್ಳದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದೇಶದ ಸುರಕ್ಷತೆಯಲ್ಲಿ ಸ್ತುತ್ಯರ್ಹ ಸೇವೆ ನಡೆಸಿದ ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಸೇನಾ ಮತ್ತು ಅರೆಸೇನಾ ಪಡೆಗಳ ಕ್ಯಾಪ್ಟನ್ ಕೆ ಅರವಿಂದಾಕ್ಷನ್ ಪಿಳ್ಳೈ ಹವಾಲ್ದಾರ್ ಶಿವರಾಮನ್ ಮತ್ತು ರಾಘವ ಪಟ್ಟಾಳಿ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಪಿ ಅಬ್ದುಲ್ಲಾ ಮತ್ತು ಶಂಕರನಾರಾಯಣ ಹೊಳ್ಳ ಅವರ ಸಂಸ್ಮರಣೆ ನಡೆಸಲಾಯಿತು.
ಈ ಸಂದರ್ಭ ಜಿಲ್ಲಾಧಿಕಾರಿ ಇನ್ಬಾಶೇಖರ್ ಅವರು ರಾಷ್ಟ್ರಧ್ವಜಾರೋಹಣ ನಡೆಸಿದರು. ಕಳೆದ ಸ್ವಾತಂತ್ರ್ಯೋತ್ಸವದಂದು ಪ್ರಧಾನಮಂತ್ರಿಯವರು ಘೋಷಿಸಿದ ಐದು ಪ್ರತಿಜ್ಞೆಗಳನ್ನು (ಪಂಚಪ್ರಾಣ್)ಬೋಧಿಸಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಬಲಿದಾನಿಗಳ ಸ್ಮರಣಾರ್ಥ ಅನೋಡಿಪಳ್ಳದ ಅಮೃತ ಸರೋವರ ಪ್ರದೇಶದಲ್ಲಿ 75 ಪ್ರಭೇದಗಳ ಗಿಡಗಳನ್ನು ನೆಟ್ಟು ಅಮೃತ ವನವನ್ನು ನಿರ್ಮಿಸಲಾಯಿತು. ನೆಹರು ಯುವ ಕೇಂದ್ರ, ಕಾಸರಗೋಡು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ , ರಾಷ್ಟ್ರೀಯ ಸೇವಾ ಯೋಜನೆ,ರಾಜ್ಯ ಯುವ ಕಲ್ಯಾಣ ಮಂಡಳಿ, ಸೀತಾಂಗೋಳಿಯ ಸಂತೋಷ್ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್ ಮತ್ತು ಇತರ ಸ್ವಯಂಸೇವಾ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಗೀತೆ ಹಾಡಲಾಯಿತು.
ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಜಯಂತಿ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಚಂದ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಅನಿತಾ ಎಂ, ಅಬ್ದುಲ್ ಮಜೀದ್, ವಾರ್ಡ್ ಸದಸ್ಯರಾದ ಸಿ ಗಂಗಾಧರನ್, ಶಾಂತಿ ವೈ, ಆಸಿಫ್ ಅಲಿ, ಕಾವ್ಯಶ್ರೀ, ಜನಾರ್ದನ ಪೂಜಾರಿ ಕಣ್ಣೂರು, ಅನಿತಾಶ್ರೀ, ಜಯಂತಿ, ಕೇಶವ ಎಸ್ ಆರ್, ಪ್ರೇಮಾ, ಬಿಡೋ ನಂದಗೋಪಾಲ ಮತ್ತು ರಾಷ್ಟ್ರೀಯ ಹಸಿರು ದಳ ಕಾಸರಗೋಡು ಸಂಯೋಜಕಿ ಸುಶ್ಮಿತಾ ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪಿ ಅಖಿಲ್ ಸ್ವಾಗತಿಸಿದರು. ಪುತ್ತಿಗೆ ಪಂಚಾಯತ್ ಕಾರ್ಯದರ್ಶಿ ರಾಜೇಶ್ವರಿ ಬಿ ವಂದಿಸಿದರು.
ಆಗಸ್ಟ್ 16 ರಿಂದ 25 ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿದ ಮಣ್ಣನ್ನು ಬ್ಲಾಕ್, ನಗರಸಭೆ ಮತ್ತು ಮಹಾನಗರ ಪಾಲಿಕೆ ಮಟ್ಟದಲ್ಲಿ ಸಂಗ್ರಹಿಸಿದ ಮಣ್ಣನ್ನು ವಿಶೇಷ ಸ್ಥಳದಲ್ಲಿ ಒಟ್ಟುಸೆರಿಸಿ ನೆಹರು ಯುವ ಕೇಂದ್ರದ ಸ್ವಯಂಸೇವಕರು ಆಗಸ್ಟ್ 27 ರ ಮೊದಲು ನವದೆಹಲಿಗೆ ತಲುಪಿಸಲಿದ್ದಾರೆ. .ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಗಿಡಗಳನ್ನು ಬಳಸಿ ನವದೆಹಲಿಯ ಕರ್ತವ್ಯಪಥದ ಬಳಿ ಅಮೃತ ವನ ನಿರ್ಮಾಣಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಇತರ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.

