ಬದಿಯಡ್ಕ: ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಬದಿಯಡ್ಕ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ನಡೆದುಬರುತ್ತಿರುವ ರಾಮಾಯಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾನುವಾರ ಸಾಹಿತಿ ಶಾರದಾ ಎಸ್ ಭಟ್ ಕಾಡಮನೆ ದೀಪೋಜ್ವಲನೆಗೈದರು. ಅವರು ಮಾತನಾಡಿ ರಾಮಾಯಣದ ಪ್ರತಿಯೊಂದು ಘಟನೆಗಳನ್ನೂ ತುಲನೆ ಮಾಡಿ ನೋಡಿದಾಗ ನಾವು ಹೇಗೆ ಜೀವಿಸಬೇಕು ಎಂಬುದನ್ನು ತಿಳಿದುಕೊಳ್ಳಬಹುದು ಎಂದರು.
ಬದಿಯಡ್ಕದ ಜನಾನುರಾಗಿ ವೈದ್ಯ ಡಾ.ಶ್ರೀನಿಧಿ ಸರಳಾಯ ಅಧ್ಯಕ್ಷತೆ ವಹಿಸಿದ್ದರು. ವೈದ್ಯ, ಧಾರ್ಮಿಕ ಮುಂದಾಳು ಡಾ. ವಿಷ್ಣುಪ್ರಕಾಶ್ ಬರೆಕರೆ ಅಭ್ಯಾಗತರಾಗಿ ಪಾಲ್ಗೊಂಡು ಮಾತನಾಡಿದರು. ಡಾ. ಬೇ.ಸೀ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಕರಿಂಬಿಲ ಲಕ್ಷ್ಮಣ ಪ್ರಭು ವಂದಿಸಿದರು. ಜ್ಯೋತ್ಸ್ನಾ ಕಡಂದೇಲು ಪ್ರಾರ್ಥನೆ ಹಾಡಿದರು. ಸಭಾ ಕಾರ್ಯಕ್ರಮದ ಬಳಿಕ ಸುನಾದ ಸಂಗೀತ ಕಲಾಶಾಲೆಯ ಸುನಾದ ಯುವ ಭಾರತಿ ಸಂಗೀತ ಕಾರ್ಯಕ್ರಮ ನಡೆಯಿತು. ಯೋಗಗುರು ಸೂರ್ಯನಾರಾಯಣ ವಳಮಲೆ ರಾಮತಾರಕ ಜಪಯಜ್ಞ ನಡೆಸಿಕೊಟ್ಟರು. ರಾಮಾಯಣ ಮಾಸಾಚರಣೆಯ ಮುಂದಿನ ಕಾರ್ಯಕ್ರಮವು ಆ.12,13,15ರಂದು ನಡೆಯಲಿದೆ.

.jpg)
