ಬದಿಯಡ್ಕ : ಸುತ್ತಲಿನ ಪರಿಸರ ನಿರೀಕ್ಷಿಸಿದಾಗ ಜೀವಿಗಳ ಪರಸ್ಪರ ಸಂಬಂಧ ಅರಿವಾಗುತ್ತದೆ.ಪ್ರತಿಯೊಂದು ಕೀಟ, ಚಿಟ್ಟೆ,ಉರಗ, ಹಕ್ಕಿಗಳಿಗೆ ಈ ಆವಾಸ ವ್ಯವಸ್ಥೆಯಲ್ಲಿ ಅದರದ್ದೇ ಆದ ಸ್ಥಾನವಿದೆ.ಜೀವಿಗಳ ಅಸ್ಥಿತ್ವನಾಶವು ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಶಿಕ್ಷಕ, ಪಕ್ಷಿ ನಿರೀಕ್ಷಕ ರಾಜು ಕಿದೂರು ಹೇಳಿದರು.
ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ 'ಪರಿಸರ ಕಡೆಗೆ ಮಕ್ಕಳ ನಡಿಗೆ' ಅಂಗವಾಗಿ ಪರಿಸರದಲ್ಲಿ ತರಗತಿ ನಡೆಸಿ ಅವರು ಮಾತನಾಡಿದರು.
ಗಿಡಮರಗಳು,ನೀರಿನ ಮೂಲಗಳ ಉಳಿವು ಮುಂದಿನ ಸುಂದರ ಬದುಕಿಗೆ ಅವಶ್ಯ. ಭೂಮಿಯಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕು ಇದೆ. ನಾವು ಪ್ರಕೃತಿಯೊಂದಿಗೆ ಸಹಬಾಳ್ವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಪೆರಡಾಲ ಪರಿಸರದ ಅನೇಕ ಗಿಡ ಮರಗಳನ್ನು ಆವಾಸ ವ್ಯವಸ್ಥೆಗಳನ್ನು ಸಂದರ್ಶಿಸಲಾಯಿತು. ಹಲವು ಬಗೆಯ ಹಕ್ಕಿಗಳು, ಕೀಟಗಳು, ಚಿಟ್ಟೆಗಳು ಮಕ್ಕಳಿಗೆ ಪರಿಚಯವಾಯಿತು. ಈ ಸಂದರ್ಭ ಶಿಕ್ಷಕ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಅವರ ಗದ್ದೆಯನ್ನು ಸಂದರ್ಶಿಸಿ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಯಿತು. ಉಣ್ಣುವ ಅಕ್ಕಿ ಬೆಳೆಯುವ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು. ಮಕ್ಕಳ ಬಯಲು ಪ್ರವಾಸದ ನೇತೃತ್ವವನ್ನು ಶಿಕ್ಷಕರಾದ ಜಯಲತ ಎಸ್, ರಾಜೇಶ್ ಎಸ್ ಹಾಗೂ ಶ್ರೀಧರ್ ಭಟ್ ವಹಿಸಿದ್ದರು. ಅಲ್ಲದೆ ಡಯಟ್ ಕಾಸರಗೋಡಿನ ಅಧ್ಯಾಪಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

.jpg)
.jpg)
