ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಂಜೇಶ್ವರ ಯೋಜನಾ ವ್ಯಾಪ್ತಿಯ ಸುಂಕದಕಟ್ಟೆ ವಲಯದ ಸುಂಕದಕಟ್ಟೆ ಒಕ್ಕೂಟದ ವತಿಯಿಂದ ಆಟಿದಕೂಟ ಕಾರ್ಯಕ್ರಮ ಕಳಿಯೂರು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತೋಡಿ ಉದ್ಘಾಟಿಸಿ ಪೂಜ್ಯ ಖಾವಂದರ ಸಮಾಜ ಸೇವಾ ಕಾರ್ಯದ ಬಗ್ಗೆ ಮಾತನಾಡಿ, ಕೆಲವೊಂದು ಸಮಾಜಘಾತುಕ ಶಕ್ತಿಗಳಿಂದ ಸಮೂಹ ಮಾಧ್ಯಮದಲ್ಲಿ ಲಕ್ಷ ಲಕ್ಷ ಜನರಿಗೆ ಸಹಕಾರ ನೀಡಿದ ಪೂಜ್ಯ ಖಾವಂದರಿಗೆ ಹಾಗೂ ಶ್ರೀ ಕ್ಷೇತ್ರಕ್ಕೆ ಇಲ್ಲಸಲ್ಲದ ಅಪವಾದಗಳನ್ನು ಸೃಷ್ಟಿಸಿ ಆರೋಪಗಳನ್ನು ಮಾಡುತ್ತಿದ್ದು ಇದನ್ನು ನಾವೆಲ್ಲ ಧರ್ಮಸ್ಥಳ ಭಕ್ತರಾಗಿ ಖಂಡಿಸಬೇಕು ಎಂದು ತಿಳಿಸಿ ಆಟಿದಕೂಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಧರ್ಮಗುರು ವಂ. ಸ್ವಾಮಿ. ಬಾಝಿಲ್ ವಾಸ್ ಅವರು ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ ಸರ್ವಧರ್ಮ ಸಮನ್ವತೆಯಿಂದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಮಾತನಾಡಿ, ಆಟಿ ತಿಂಗಳ ಸಂಪ್ರದಾಯದ ಹಿರಿತನದ ಬಗ್ಗೆ ಮಾತನಾಡಿದರು.
ಬಜಿಲಕರಿಯ ಶ್ರೀ ಶಾರಂಗಪಾಣಿ ಕ್ಷೇತ್ರದ ಆಡಳಿತ ಮೋಕ್ತೇಸರ ಪ್ರಕಾಶ್ ನಾಯ್ಕ ಆಳಿಕೋಡಿ ಅವರು ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು, ಆಟಿ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳ ಬಗ್ಗೆ ವಿವಿಧ ಆಚರಣೆಯ ಬಗ್ಗೆ ಮಾತನಾಡಿದರು.
ಸುಂಕದಕಟ್ಟೆ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟದ ಅಧ್ಯಕ್ಷ ದಿನೇಶ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಂಕದಕಟ್ಟೆ ವಲಯದ್ಯಕ್ಷ ಸೋಮಶೇಖರ್ ಸುವರ್ಣ, ವಲಯ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ನಡೆಯುವ ಕಾರ್ಯಕ್ರಮದ ಹಾಗೂ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾದರಿ ಭತ್ತ ಕೃಷಿಕೆ ಜಲಜಾಕ್ಷಿ ಮಂದ್ರಬೈಲು ವರ್ಕಾಡಿ ಇವರನ್ನು ಸನ್ಮಾನಿಸಲಾಯಿತು. ಸೇವಾ ಪ್ರತಿನಿಧಿ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಸುಧಾಕರ್ ವರದಿ ವಾಚಿಸಿದರು. ಸಪ್ನ ಕಾರ್ಯಕ್ರಮ ನಿರೂಪಿಸಿದರು. ಆಟಿ ತಿಂಗಳ 30 ಬಗೆಯ ತಿಂಡಿ ತಿನಿಸುಗಳನ್ನು ಪ್ರದರ್ಶಿಸಲಾಗಿತ್ತು.

.jpg)
