ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಶುಕ್ರವಾರ ನಸುಕಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸೇನಾ ಸಿಬ್ಬಂದಿ ಹುತಾತ್ಮರಾದ ಬೆನ್ನಲ್ಲೇ, ಸ್ಥಳದಲ್ಲಿ ಅವಿತಿರುವ ಉಗ್ರರನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಭಾರಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಉಗ್ರರು ಈ ಪ್ರದೇಶದಲ್ಲಿ ಅವಿತಿರುವ ಶಂಕೆ ಇದ್ದು, ಶುಕ್ರವಾರ ರಾತ್ರಿಯಿಡೀ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಸ್ಥಳಕ್ಕೆ ಹೆಚ್ಚುವರಿ ಪಡೆಗಳು ದೌಡಾಯಿಸಿದ್ದು, ಶನಿವಾರ ಬೆಳಿಗ್ಗೆಯಿಂದಲೇ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಉಗ್ರರ ಗುಂಪು ಪಿರ್ ಪಂಜಾಲ್ ಶ್ರೇಣಿಯ ಮೂಲಕ ಕುಲ್ಗಾಮ್ ಜಿಲ್ಲೆ ತಲುಪಿರಬಹುದೆಂದು ನಂಬಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಕುಂಡ್ ಪ್ರದೇಶದಲ್ಲಿ ಸ್ಫೋಟದ ಶಬ್ದ ಕೇಳಿಸಿದ ನಂತರ ಮತ್ತೊಂದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸ್ಫೋಟದ ಶಬ್ದ ಕೇಳಿಸಿದಾಗ ಸೇನೆಯ ಕೆಲವು ವಾಹನಗಳು ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದವು. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಹಾಲನ್ ಅರಣ್ಯ ಪ್ರದೇಶದ ಎತ್ತರದ ಸ್ಥಳದಲ್ಲಿ ಶುಕ್ರವಾರ ಸೈನಿಕರ ಬಿಡಾರಗಳ ಮೇಲೆ ಉಗ್ರರು ಗುಂಡು ಹಾರಿಸಿದ ನಂತರ, ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ದಾಳಿಯ ನಂತರ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದರು. ಗಾಯಗೊಂಡಿದ್ದ ಮೂವರು ಸೇನಾ ಸಿಬ್ಬಂದಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.