ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ನೂತನ ಶಾಲಾ ಕಟ್ಟಡಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅಧ್ಯಕ್ಷತೆಯಲ್ಲಿ, ಮುಂಬೈನ ಹೇರಂಭ ಇಂಡಸ್ಟ್ರೀಸ್ ಮಾಲಕ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶಿಲಾನ್ಯಾಸ ನೆರವೇರಿಸಿದರು.
ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಶುಭಾರಂಭಗೈದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ, ವಿದ್ಯೆ ಮಾರಾಟದ ವಸ್ತುವಾಗದೇ, ಈ ಗ್ರಾಮೀಣ ಪ್ರದೇಶದಲ್ಲಿ ಪ್ರಜ್ಞಾವಂತರನ್ನು ನಿರ್ಮಾಣ ಮಾಡುವ ಕೇಂದ್ರವಾಗಿ ಈ ವಿದ್ಯಾಲಯ ಸಂಸ್ಕಾರವನ್ನೂ ನೀಡುತ್ತಿದ್ದು, ಇದರ ಬೆಳವಣಿಗೆಯಲ್ಲಿ ಇನ್ನಷ್ಟು ವಿದ್ಯಾಭಿಮಾನಿಗಳು ಕೈಜೋಡಿಸಿ ಸಹಕರಿಸಬೇಕಿದೆ ಎಂದು ಕರೆ ನೀಡಿದರು.
ಶಿಲಾಫಲಕ ಅನಾವರಣಗೈದ ಸದಾಶಿವ ಶೆಟ್ಟಿ ಅವರು, ಉತ್ತಮ ಸಂಸ್ಕಾರಭರಿತ ಶಿಕ್ಷಣ ನೀಡುವ ಈ ಒಳ್ಳೆಯ ಕೆಲಸ ಅಭಿನಂದನಾರ್ಹ ಎಂದರು.
ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅವರು ಅಧ್ಯಕ್ಷತೆ ವಹಿಸಿ, ನೂತನ ಶಾಲಾಕಟ್ಟಡದ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಶ್ರೀಮಠದ ವಿವಿಧ ಚಟುವಟಿಕೆಗಳನ್ನು ಶ್ಲಾಘಿಸಿ, ಇಂತಹ ಕೇಂದ್ರಗಳು ಭವ್ಯ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬುವುದರಲ್ಲಿ ಸಂಶಯವಿಲ್ಲ ಎಂದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ನವಮಂಗಳೂರು ಬಂದರು ನಿಗಮ ನಿಯಮಿತದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಅವರು, ಉತ್ತಮ ಶಿಕ್ಷಣ ನೀಡುವ ಇಂತಹ ವಿದ್ಯಾಕೇಂದ್ರಗಳ ಆವಶ್ಯಕತೆ ಎಲ್ಲೆಡೆಯೂ ಇದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಮುಂಬೈನ ಹೇರಂಭ ಇಂಡಸ್ಟ್ರೀಸ್ ಎಂ.ಡಿ. ರಘುರಾಮ ಶೆಟ್ಟಿ ಕುಳೂರು ಕನ್ಯಾನ ಅವರು, ಇಂತಹ ದೈವಿಕ ಕೇಂದ್ರಗಳಿಂದ ಸಾಮಾಜಿಕ ಚಟುವಟಿಕೆ ನಡೆಯುವುದು ಅತೀ ಅಗತ್ಯ ಎಂದು ಶ್ರೀಮಠದ ಚಟುವಟಿಕೆಗಳನ್ನು ಶ್ಲಾಘಿಸಿದರು.
ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಉದ್ಯಮಿ ಶಶಿಧರ ಶೆಟ್ಟಿ ಗ್ರಾಮಚಾವಡಿ, ಬೆಂಗಳೂರಿನ ಡಾ.ಮೋಹನದಾಸ್, ಮಂಗಳೂರಿನ ಉದ್ಯಮಿ ಎ.ಜೆ. ಶೇಖರ್ ಮತ್ತು ನಿತ್ಯಾನಂದ ಯೋಗಾಶ್ರಮ ಮುಂಬೈ ಸಮಿತಿ ಅಧ್ಯಕ್ಷ ರಾಜೇಶ್ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕು.ಗಾಯತ್ರಿ,ಕು.ಶ್ರಾವಣ್ಯ ಪ್ರಾರ್ಥನೆಯೊಂದಿಗಿನ ಕಾರ್ಯಕ್ರಮದಲ್ಲಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿ, ಡಾ. ಜೆ.ಪಿ. ತೊಟ್ಟೆತ್ತೋಡಿ ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.




.jpg)
.jpg)
