ನವದೆಹಲಿ: ಮ್ಯಾನ್ಮಾರ್‌ನಲ್ಲಿನ ಅಸ್ಥಿರತೆಯು ಮಣಿಪುರದ ಜನಾಂಗೀಯ ಸಂಘರ್ಷಕ್ಕೆ ಕಾರಣ ಎಂದು ಗೃಹ ಸಚಿವ ಅಮಿತ್ ಶಾ ದೂರಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಮುದಾಯಗಳಿಗೆ ಅವರು ಮನವಿ ಮಾಡಿದ್ದಾರೆ.
ಮ್ಯಾನ್ಮಾರ್‌ನ ರಾಜಕೀಯ ಅಸ್ಥಿರತೆಯಿಂದಾಗಿ ಸಾವಿರಾರು ಮಂದಿ ನಿರಾಶ್ರಿತರು ಗಡಿಯನ್ನು ದಾಟಿ ಮಣಿಪುರಕ್ಕೆ ಪಲಾಯನ ಮಾಡಿದ್ದಾರೆ ಎಂದು ಶಾ ಸಂಸತ್ತಿಗೆ ತಿಳಿಸಿದರು.
ಮೇ ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 180ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಹಲವರು ನಿರಾಶ್ರಿತರಾಗಿದ್ದಾರೆ.
2021ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ದಂಗೆ ಬಳಿಕ ಸೇನಾಡಳಿತ ದೇಶದಾದ್ಯಂತ ಪ್ರಜಾಪ್ರಭುತ್ವ ಪರ ಶಕ್ತಿಗಳ ವಿರುದ್ಧ ಹೋರಾಡುತ್ತಿದೆ. ಉತ್ತರ ಮ್ಯಾನ್ಮಾರ್‌ನಲ್ಲಿರುವ ಚಿನ್ ಸಮುದಾಯದ ಜನರು ಮತ್ತು ಮಣಿಪುರದ ಕುಕಿಗಳು ಒಂದೇ ವಂಶಪರಂಪರೆಯವರಾಗಿದ್ದಾರೆ.
ಮಣಿಪುರದಲ್ಲಿ ಕಾದಾಡುತ್ತಿರುವ ಬಹುಸಂಖ್ಯಾತ ಮೈತೇಯಿ ಮತ್ತು ಕುಕಿ ಸಮುದಾಯಗಳ ಜನರು ಶಾಂತಿ ಸ್ಥಾಪನೆಗಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದು ಶಾ ಒತ್ತಾಯಿಸಿದರು.
ಕುಕಿ ಬುಡಕಟ್ಟು ಸಮುದಾಯದ ಜನರು ಬೆಟ್ಟಗಳಲ್ಲಿ ವಾಸಿಸುವವರು. ಮಣಿಪುರ ಜನಸಂಖ್ಯೆಯ ಶೇಕಡ 16ರಷ್ಟಿರುವ ಕುಕಿಗಳು ಆರ್ಥಿಕ ಪ್ರಯೋಜನಗಳು, ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೊಂದಿದ್ದಾರೆ. ಮೈತೇಯಿ ಸಮುದಾಯದವರು ತಮ್ಮನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇರಿಸಿದ್ದಾರೆ. ಮಣಿಪುರ ಹೈಕೋರ್ಟ್ ಈಚೆಗೆ ನೀಡಿದ ಆದೇಶದಲ್ಲಿ, ಈ ಬೇಡಿಕೆಯ ವಿಚಾರವಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ತನ್ನ ಶಿಫಾರಸನ್ನು ಕಳುಹಿಸಬೇಕು ಎಂದು ಸೂಚಿಸಿತ್ತು. ಈ ಸೂಚನೆಯನ್ನು ವಿರೋಧಿಸಿ ಕುಕಿ ಬುಡಕಟ್ಟು ಸಮುದಾಯ ಪ್ರತಿಭಟನೆಗೆ ಮುಂದಾಗಿತ್ತು. ಆ ಬಳಿಕ ಎರಡೂ ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿತು.




.webp)
