ಕಾಸರಗೋಡು: ಕಳೆದ ಐದು ತಿಂಗಳಿನಿಂದ ಪಿಂಚಣಿ ವಿತರಣೆಯಾಗದಿರುವುದನ್ನು ಪ್ರತಿಭಟಿಸಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ತಾಯಂದಿರು ಹಾಗೂ ಸಂತ್ರಸ್ತರ ಆಶ್ರಿತರು ರಸ್ತೆಯಲ್ಲಿ ಖಾಲಿ ಎಲೆ ಹರಡಿ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದರು. ಎಂಡೋಸಲ್ಫಾನ್ ಸಂತ್ರಸ್ತರ ಜನಪರ ಒಕ್ಕೂಟ ನೇತೃತ್ವದಲ್ಲಿ ಕಾಞಂಗಾಡ್ ಸಿವಿಲ್ ಠಾಣೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ರಾಜ್ಯ ಓಣಂ ಹಬ್ಬದ ಸಂಭ್ರಮದಲ್ಲಿದ್ದರೆ, ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಕುಟುಂಬಗಳು ಔಷಧ, ಚಿಕಿತ್ಸೆ, ಪಿಂಚಣಿ ಪಡೆಯಲು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿರುವುದು ಖಂಡನೀಯ. ಕಳೆದ ಕೆಲವು ತಿಂಗಳಿಂದ ಪಿಂಚಣಿಯೂ ಕೈಸೇರುತ್ತಿಲ್ಲ. ಸರ್ಕಾರಿ ಆದೇಶ ಪ್ರಕಾರ ಎರಡು ಕ್ಯಾಟಗರಿಗಳಲ್ಲಾಗಿ 1200ರೂ. ಹಾಗೂ 2200ರೂ. ಪಿಂಚಣಿ ಲಭಿಸಬೇಕಾಗಿದ್ದು, 2200ರೂ. ಪಡೆಯುವವರಿಗೆ 1700ರೂ. ಮಾತ್ರ ವಿತರಣೆಯಾಗಿದೆ, ಇದು ಎಂಡೋಸಂತ್ರಸ್ತರಲ್ಲಿ ಸರ್ಕಾರ ತೋರುವ ತಾರತಮ್ಯ ಧೋರಣೆಯಾಗಿದೆ ಎಂಬುದಾಗ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಕೆ. ಚಂದ್ರಾವತಿ, ಫರೀನಾ ಕೊಟ್ಟಪುರಂ, ಅಂಬಲತ್ತರ ಕುಞÂಕೃಷ್ಣನ್, ರಾಜನ್ ಕಯ್ಯೂರು, ಶಿವಕುಮಾರ್ ಎಣ್ಮಕಜೆ, ಮುನೀರ್ ಆರಂಗಡಿ, ಶ್ಯಾಮಲಾ ಕಾಞಂಗಾಡ್, ಬಾಲಕೃಷ್ಣ ಕಲ್ಲರ್, ಒ.ಜೆ. ರಾಜು, ಸಿ.ಕೃಷ್ಣಕುಮಾರ್, ವಿಲಾಸಿನಿ ಮುಳಿಯಾರ್, ಅಭಿಷ್ ಕಲ್ಲಾರ, ವೇಣು ಅಜಾನೂರು ಉಪಸ್ಥಿತರಿದ್ದರು.


