ಬದಿಯಡ್ಕ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಹಿಂದೆ ಬೀಳಬಾರದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲೂ ಪಕ್ಷವು ಗೆದ್ದುಬರಬೇಕಾಗಿರುವುದು ಅನಿವಾರ್ಯ ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಎಂ.ಟಿ.ರಮೇಶ್ ಹೇಳಿದರು.
ಭಾರತೀಯ ಜನತಾ ಪಕ್ಷದ ಬದಿಯಡ್ಕ ಮಂಡಲ ಕಚೇರಿಯಲ್ಲಿ ಕರ್ಷಕ ಮೋರ್ಚಾ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜರಗಿದ ಹೊಸ ಸದಸ್ಯತನ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಾವು ಪ್ರತಿಭಟಿಸಬೇಕಿದೆ. ಜನರನ್ನು ಸಂಘಟಿಸಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪಕ್ಷಕ್ಕೆ ಸೇರಿಸುವ ಮೂಲಕ ಚುನಾವಣೆಗೆ ಸಿದ್ಧರಾಗಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವಂತೆ ನೋಡಿಕೊಳ್ಳಬೇಕು. ತಳಮಟ್ಟದ ಸಿದ್ಧತೆಯು ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ರವೀಶತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಜೆಪಿಯನ್ನು ಪರಾಭವಗೊಳಿಸಲು ಪ್ರತೀಬಾರಿಯೂ ಎಡಬಲರಂಗಗಳು ಒಂದಾಗುತ್ತಿವೆ ಎನ್ನುವುದು ಇದುವರೆಗೆ ನಾವು ಕಂಡುಕೊಂಡಿರುವ ವಿಚಾರವಾಗಿದೆ. ಇತರೆಲ್ಲರೂ ಒಂದಾದರೂ ಬಿಜೆಪಿಯನ್ನು ಪರಾಭವಗೊಳಿಸಲು ಸಾಧ್ಯವಾಗದಂತೆ ಪಕ್ಷವು ಬೆಳೆಯಬೇಕು ಎಂದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಎಲ್.ಅಶ್ವಿನಿ, ಜಿಲ್ಲಾ ಉಪಾಧ್ಯಕ್ಷ ಎಂ.ಸುಧಾಮ ಗೋಸಾಡ, ಜಿಲ್ಲಾ ಪ್ರ.ಕಾರ್ಯದರ್ಶಿ ವಿಜಯ ರೈ, ಜಿಲ್ಲಾ ಕಾರ್ಯದರ್ಶಿ ಮಣಿಲಾಲ್ ಉಪಸ್ಥಿತರಿದ್ದರು. ಕರ್ಷಕ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಳಾಲ್ ಕುಂಞÂಕಣ್ಣನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಚಂದು ಮಾಸ್ತರ್ ವಂದಿಸಿದರು.




