ಪತ್ತನಂತಿಟ್ಟ: ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ನಿರಪುತ್ತರಿ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಲಾಗಿದೆ. ನಿರಪುತ್ತರಿ ದರ್ಶನಕ್ಕೆ ಸಾವಿರಾರು ಮಂದಿ ಶಬರಿಮಲೆಗೆ ಆಗಮಿಸಿದ್ದರು.
ಹೊಸ ವರ್ಷವನ್ನು ಸಮೃದ್ಧವಾಗಿ ಸ್ವಾಗತಿಸುವ ಹಬ್ಬ ನಿರಪುತ್ತರಿ ಹಬ್ಬವಾಗಿ ಪ್ರಸಿದ್ದವಾಗಿದೆ. ಶಬರಿನಾಥನನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಅತೀ ಹೆಚ್ಚು ಭಕ್ತರು ಆಗಮಿಸಿರುವುದಾಗಿ ದೇವಸ್ವಂ ಮಂಡಳಿ ತಿಳಿಸಿದೆ. ತಂತ್ರಿ ಕಂಠಾರರ್ ರಾಜೀವ ಅವರು ಭತ್ತದ ತೆನೆಗಳಿಗೆ ಪೂಜೆ ಸಲ್ಲಿಸಿ ದೇಗುಲದೊಳಗೆ ತಂದು ವಿಶೇಷ ಅರ್ಚನೆ ಸಲ್ಲಿಸಿದರು. ನಂತರ ತೆನೆಗಳನ್ನು ದೇಗುಲದ ಮುಂದೆ ಕಟ್ಟಲಾಯಿತು.
ಗುರುವಾರ ಬೆಳಗಿನ ಜಾವ 5 ಗಂಟೆಯಿಂದ ಆರಂಭವಾದ ಪೂಜೆಯ ನಂತರ ಸನ್ನಿಧಾನದಲ್ಲಿ ಸನ್ನಿಧಿಯ ಗದ್ದೆ ಹಾಗೂ ಭಕ್ತರು ಅರ್ಪಿಸಿದ ತೆನೆಗಳನ್ನು ದೇವಸ್ಥಾನದ ತಂತ್ರಿ ಕಂಠಾರರ್ ರಾಜೀವ ಅವರು 5.45ಕ್ಕೆ ವಿಶೇಷ ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಬೆಳಗ್ಗೆ 6.15ಕ್ಕೆ ಸಮಾರಂಭ ಮುಗಿಯಿತು. ನಿತ್ಯ ಪೂಜೆಗಳ ನಂತರ ರಾತ್ರಿ 10 ಗಂಟೆಗೆ ಹರಿವರಾಸನ ಗಾಯನ ನಡೆಯಿತು. ಸಿಂಹ ಮಾಸದ ಪೂಜೆಗಳಿಗಾಗಿ ಆ.16ರಂದು ಮತ್ತೆ ಗರ್ಭಗೃಹದ ಬಾಗಿಲು ತೆರೆಯಲಾಗುವುದು. 21ರಂದು ರಾತ್ರಿ ಪೂಜೆಗಳು ಮುಗಿದು ಮುಚ್ಚಲಾಗುವುದು. 27ರಂದು ಓಣಂ ಪೂಜೆಗಳಿಗೆ ಗರ್ಭಗೃಹದ ಬಾಗಿಲು ತೆರೆಯಲಾಗುತ್ತದೆ. 31 ರಂದು ಮುಚ್ಚಲಾಗುತ್ತದೆ.





