ಕುಂಬಳೆ: ಪದೇ ಪದೇ ಅಪಘಾತಕ್ಕೆ ಕಾರಣವಾಗುತ್ತಿರುವ ಕಟ್ಟತ್ತಡ್ಕ ಜಂಕ್ಷನ್‍ನಲ್ಲಿ ವಾಹನಗಳ ವೇಗ ತಗ್ಗಿಸಲು ಯಾಂತ್ರಿಕ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಹೆಚ್ಚಿದೆ.
ಕಟ್ಟತ್ತಡ್ಕ ಸೀತಾಂಗೋಳಿಯ ಬಳಿಕದ ಪ್ರಮುಖ ಜಂಕ್ಷನ್ ಆಗಿದ್ದು, ಪ್ರತಿದಿನ ಪೆರ್ಲ, ಸೀತಾಂಗೋಳಿ, ಆರಿಕ್ಕಾಡಿ, ಅಂಗಡಿಮೊಗರು ಮತ್ತು ಪೆರ್ಮುದೆ ಪ್ರದೇಶಗಳಿಗೆ ಅನೇಕ ಬಸ್‍ಗಳು ಸೇರಿದಂತೆ ವಾಹನಗಳು ಈ ಮೂಲಕ ಸಂಚರಿಸುತ್ತದೆ. ಈ ಜನನಿಬಿಡ ಜಂಕ್ಷನ್‍ನಲ್ಲಿ ಪಾದಚಾರಿಗಳು ರಸ್ತೆ ದಾಟುವಾಗ ವೇಗವಾಗಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತಗಳಿಗೆ ಕಾರಣವಾಗುತ್ತಿರುವುದು ಕಳವಳ ಮೂಡಿಸಿದೆ. ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ಬರುವವರು ಇಲ್ಲಿಂದ ವಿವಿಧ ಭಾಗಗಳಿಗೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಿದ್ಧಪಡಿಸುವ ಅಗತ್ಯವಿದೆ. ಮೇಲ್ದರ್ಜೆಗೇರಿದ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿವೆ. ಇಲ್ಲಿ ಸಂಜೆ ವೇಳೆ ಭಾರೀ ಜನದಟ್ಟಣೆ ಉಂಟಾಗುತ್ತದೆ. ಟ್ರಾಫಿಕ್ ಸರ್ಕಲ್ ಅಥವಾ ಸ್ಪೀಡ್ ಬ್ರೇಕರ್ ಅಗತ್ಯವಿದೆ. ಸೀತಾಂಗೋಳಿ-ಪೆರ್ಮುದೆ ಮೂಲಕ ನೆರೆಯ ಕರ್ನಾಟಕದ ವಿಟ್ಲ- ಪುತ್ತೂರು ಮತ್ತು ಇತರ ಸ್ಥಳಗಳಿಗೆ ತಲುಪಲು ಹತ್ತಿರದ ರಸ್ತೆಯಾಗಿರುವುದರಿಂದ ಅನೇಕ ವಾಹನಗಳು ಕಟ್ಟತ್ತಡ್ಕ ಜಂಕ್ಷನ್ ಮೂಲಕ ಹಾದು ಹೋಗುತ್ತವೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಗೆ ತಲಪಲು ಎಣ್ಮಕಜೆ, ಪುತ್ತಿಗೆ ಹಾಗೂ ಬದಿಯಡ್ಕ ಪಂಚಾಯತಿಗಳಿಗೆ ಕಟ್ಟತ್ತಡ್ಕ ಪ್ರಮುಖ ಕೇಂದ್ರವಾಗಿದೆ. ಹಲವು ಅವಘಡಗಳು ಸಂಭವಿಸಿ ಅಪಾಯಗಳು ಈಗಾಗಲೇ ಹೆಚ್ಚಿದ್ದು, ಅವಘಡಗಳು ಇನ್ನಷ್ಟು ಸಮಸ್ಯೆಗಳಾಗದಂತೆ ಸುರಕ್ಷತಾ ವ್ಯವಸ್ಥೆ ಸಿದ್ಧಪಡಿಸುವ ಅಗತ್ಯವಿದೆ.




.jpg)
