ಕಾಸರಗೋಡು: ಖ್ಯಾತ ಕನ್ನಡ-ತುಳು ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ 65ನೇ ಹುಟ್ಟುಹಬ್ಬವನ್ನು'ಸಮತಾ ಸಾಹಿತ್ಯ ಸೌರಭ'ಹೆಸರಿನಲ್ಲಿ ಆ. 12ರಂದು ಮಧೂರು ಸನಿಹದ ಉಳಿಯತ್ತಡ್ಕ ಶ್ರೀ ಶಕ್ತಿ ಸಭಾಭವನದಲ್ಲಿ ಜರುಗಲಿದೆ. ಬದಿಯಡ್ಕದ ಸಮತಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗ್ಗೆ 9.30ಕ್ಕೆ ಕಾವ್ಯ ಗಾಯನ-ಕುಂಚ ಕಲಾ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಸಿರಿಬಾಗಿಲು ರಾಮಕೃಷ್ಣ ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. 10.30ಕ್ಕೆ ನಡೆಯುವ ವಿಚಾರಗೋಷ್ಠಿಯಲ್ಲಿ ರಾಧಾಕೃಷ್ಣ ಉಳಯತ್ತಡ್ಕ ಅವರ ಸಾಹಿತ್ಯಾವಲೋಕನ ನಡೆಯುವುದು. ವಿಶ್ರಾಂತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ ಅಧ್ಯಕ್ಷತೆ ವಹಿಸುವರು. ಕಾವ್ಯದ ಬಗ್ಗೆ ಡಾ. ಧನಂಜಯ ಕುಂಬಳೆ, ಗದ್ಯಗಳ ಬಗ್ಗೆ ಸಂಶೋಧನಾ ವಿದ್ಯಾರ್ಥಿ ಸುಜಾತಾ ಮಾಣಿಮೂಲೆ, ಪತ್ರಿಕೋದ್ಯಮದ ಬಗ್ಗೆ ಪತ್ರಕರ್ತ ವಿಕ್ರಂ ಕಾಂತಿಕೆರೆ ವಿಷಯ ಮಂಡಿಸುವರು. ಮಧ್ಯಾಹ್ನ 12ಕ್ಕೆ ರಾಧಾಕೃಷ್ಣ ಉಳಿಯತ್ತಡ್ಕ ಅವರ'ಮೌನ ಬಿಚ್ಚಿದ ಭಾವ'ಕೃತಿ ಬಿಡುಗಡೆ ನಡೆಯುವುದು. ಸಹಾಯಕ ಕನ್ನಡ ಪ್ರಾಧ್ಯಾಪಕಿ ಡಾ. ಆಶಾಲತಾ ಚೇವಾರ್ ಅಧ್ಯಕ್ಷತೆ ವಹಿಸುವರು. ಸಾಹಿತಿ ರಘು ಇಡ್ಕಿದು ಕೃತಿ ಬಿಡುಗಡೆಗೊಳಿಸುವರು. ವನಜಾಕ್ಷಿ ಚಂಬ್ರಕಾನ ಕೃತಿಪರಿಚಯ ನೀಡುವರು.
ಈ ಸಂದರ್ಭ ನಡೆಯುವ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ ಅವರೊಂದಿಗೆ ಅವರ ಬದುಕು ಬರಹದ ಬಗ್ಗೆ ಸಂವಾದ ಮಾತುಕತೆ ನಡೆಯುವುದು. ಮಧ್ಯಾಹ್ನ 1.30ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ 2.30ಕ್ಕೆ ನೆಡಯುವ ಅಭಿನಂದನಾ ಸಮಾರಂಭದಲ್ಲಿ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ದೃಶ್ಯ ಸಾಕ್ಷ್ಯಚಿತ್ರವನ್ನು ಕಣ್ಣೂರು ವಿವಿ ಬಹುಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎ.ಎಂ ಶ್ರೀಧರನ್ ಬಿಡುಗಡೆಗೊಳಿಸುವರು. ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ ಆಯಿಷಾ ಎ.ಎ ಪೆರ್ಲ ಅಭಿನಂದನಾ ಭಾಷಣ ಮಾಡುವರು.




