HEALTH TIPS

ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

                ವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರನ್ನು (ಸಿಜೆಐ) ಹೊರಗೆ ಇರಿಸುವ ಉದ್ದೇಶದ ಮಸೂದೆಯನ್ನು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಗುರುವಾರ ಮಂಡಿಸಿದೆ. ಸಿಜೆಐ ಬದಲಿಗೆ ಸಂಪುಟ ದರ್ಜೆಯ ಸಚಿವರೊಬ್ಬರು ಸಮಿತಿಯ ಸದಸ್ಯರಾಗಲಿದ್ದಾರೆ.

               ಇದರಿಂದಾಗಿ ಸರ್ಕಾರಕ್ಕೆ ನೇಮಕಾತಿಯಲ್ಲಿ ಹೆಚ್ಚಿನ ಅಧಿಕಾರ ದೊರೆಯುತ್ತದೆ ಎನ್ನಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಕ್ಕೆ ಪ್ರಧಾನಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇರುವ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮೂರು ತಿಂಗಳ ಹಿಂದೆ ಹೇಳಿತ್ತು. ಸಂಸತ್ತು ಕಾನೂನು ರೂಪಿಸುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ ಎಂದು ಕೋರ್ಟ್ ಹೇಳಿತ್ತು.

                    ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರು (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ 2023 ಅನ್ನು ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು.

                   ಕಾಂಗ್ರೆಸ್‌, ಎಎಪಿ ಸೇರಿದಂತೆ ವಿರೋಧ ಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ಸಂವಿಧಾನ ಪೀಠದ ಆದೇಶವನ್ನು ದುರ್ಬಲ ಮತ್ತು ಬುಡಮೇಲುಗೊಳಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

             ಚುನಾವಣಾ ಆಯುಕ್ತರಾಗಿರುವ ಅನೂಪ್‌ ಚಂದ್ರ ಪಾಂಡೆ ಅವರು ಮುಂದಿನ ವರ್ಷ ಫೆಬ್ರುವರಿ 14ರಂದು ನಿವೃತ್ತರಾಗಲಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ವೇಳಾಪಟ್ಟಿಯು 2024ರ ಮಾರ್ಚ್‌ನಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಈ ಹಿಂದಿನ ಎರಡು ಚುನಾವಣೆ ಸಂದರ್ಭಗಳಲ್ಲಿಯೂ ಮಾರ್ಚ್‌ನಲ್ಲಿ ವೇಳಾಪಟ್ಟಿ ಪ್ರಕಟವಾಗಿತ್ತು.

                    ಹಾಗಾಗಿಯೇ ಈಗ ಸರ್ಕಾರ ಮಂಡಿಸಿರುವ ಮಸೂದೆಗೆ ಮಹತ್ವ ಬಂದಿದೆ.

              ಈ ಮಸೂದೆ ಜಾರಿಯಾದರೆ, ನ್ಯಾಯಸಮ್ಮತ ಚುನಾವಣೆ ನಡೆಸುವ ಆಶಯಕ್ಕೆ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಸದಸ್ಯರು, ಸಭಾಪತಿ ಅವರ ಪೀಠದ ಮುಂದೆ ತೆರಳಿ ಗದ್ದಲ ಎಬ್ಬಿಸಿದರು. ಜಾನ್ ಬ್ರಿಟ್ಟಾಸ್‌ ಮತ್ತು ಇತರ ಕೆಲವು ಸದಸ್ಯರು ಮಸೂದೆ ಮಂಡನೆಗೆ ಆಕ್ಷೇಪಿಸಿ ನೋಟಿಸ್‌ ಸಲ್ಲಿಸಿದರು.

                ಮಸೂದೆಯಿಂದ ಚುನಾವಣಾ ಆಯೋಗವು ಸರ್ಕಾರದ ಕೈಗೊಂಬೆಯಾಗಲಿದೆ. ಈಗಿರುವ ಆಯೋಗವನ್ನು 'ಮೋದಿ ಚುನಾವಣಾ ಆಯೋಗ'ವೆಂದು ಬದಲಾಯಿಸುವುದು ಸೂಕ್ತ ಎಂದು ದೂರಿದರು.

                                       'ಇಂಡಿಯಾ' ಸದಸ್ಯರ ವಿರೋಧ:

                 'ಉದ್ದೇಶಿತ ಹೊಸ ನೇಮಕ ಸಮಿತಿಯಲ್ಲಿ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್‌ನ ಒಬ್ಬ ಸದಸ್ಯ ಇರುತ್ತಾರೆ. ಚುನಾವಣಾ ಆಯೋಗಕ್ಕೆ ನೇಮಕವಾಗುವ ಸದಸ್ಯರು ಆಡಳಿತಾರೂಢ ಪಕ್ಷಕ್ಕೆ ಹೆಚ್ಚು ನಿಷ್ಠೆ ಹೊಂದುವ ಸಾಧ್ಯತೆ ಇರುತ್ತದೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

                'ಆಯೋಗಕ್ಕೆ ಸದಸ್ಯರ ನೇಮಕ ಸಂಬಂಧ ಸುಪ್ರೀಂ ಕೋರ್ಟ್‌ ಹೊಸ ಪ್ರಕ್ರಿಯೆ ರೂಪಿಸಿದೆ. ಇದರನ್ವಯ ರಚಿಸಿರುವ ಸಮಿತಿಯು ನಿಷ್ಪಕ್ಷಪಾತವಾಗಿಲ್ಲವೇ? ಪಕ್ಷಪಾತಿಯಾಗಿ ಆಯುಕ್ತರ ನೇಮಕಕ್ಕೆ ಪ್ರಧಾನಿ ಅವರು ಇಚ್ಛಿಸಿರುವುದೇಕೆ' ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಎಕ್ಸ್‌ನಲ್ಲಿ (ಟ್ವಿಟರ್‌) ಟ್ವೀಟ್‌ ಮಾಡಿದ್ದಾರೆ.

                 'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಸರ್ಕಾರ ಈ ಮಸೂದೆ ಮಂಡಿಸಿದೆ' ಎಂದು ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ದೂರಿದ್ದಾರೆ.

'ಮೋದಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಬದಿಗೆ ಸರಿಸಿ ಚುನಾವಣಾ ಆಯೋಗದ ಮೇಲೆ ಅಧಿಕಾರ ಸಾಧಿಸಲು ಹೊರಟಿದೆ. ಮಸೂದೆ ಅನ್ವಯ ಮೋದಿ ಹಾಗೂ ಒಬ್ಬ ಸಚಿವರು ಆಯೋಗದ ಸದಸ್ಯರನ್ನು ನೇಮಿಸಲಿದ್ದಾರೆ. 'ಇಂಡಿಯಾ' ಮೈತ್ರಿಕೂಟ ರಚನೆಯಾದ ಬಳಿಕ ಬಿಜೆಪಿಗೆ ಭಯ ಶುರುವಾಗಿದೆ. ಅದಕ್ಕಾಗಿಯೇ ಈ ಪ್ರಯತ್ನಕ್ಕೆ ಮುಂದಾಗಿದೆ' ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries