ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಜಿ20 ಶೃಂಗಸಭೆಗೆ ಗೈರಾಗಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೆ ಪರೋಕ್ಷ ಟಾಂಗ್ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, 'ಶೃಂಗಸಭೆ ಉತ್ತಮವಾಗಿ ನಡೆಯುತ್ತಿದೆ' ಎಂದು ಹೇಳಿದ್ದಾರೆ.
ಜಿ 20 ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಿದಾಗ ಅವರ ಜೊತೆಯಲ್ಲಿ ಆಗಮಿಸಿದ್ದ ಅಮೆರಿಕದ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಮಾತನಾಡಿದ ಜೋ ಬೈಡನ್, 'ಜಿ20 ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಶೃಂಗಸಭೆ "ಚೆನ್ನಾಗಿ ನಡೆಯುತ್ತಿದೆ" ಎಂದು ಹೇಳುವ ಮೂಲಕ ಪರೋಕ್ಷ ಟಾಂಗ್ ನೀಡಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಅನುಪಸ್ಥಿತಿಯು ಜಿ 20 ನಾಯಕರ ಶೃಂಗಸಭೆಯ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಬೈಡನ್, "ಅವರು ಇಲ್ಲಿದಿದ್ದರೆ ಚೆನ್ನಾಗಿರುತ್ತಿತ್ತು. ಆದರೂ ಶೃಂಗಸಭೆ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು.
ಇದೇ ಪ್ರಶ್ನೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಕೇಳಿದಾಗ, 'ಇಂತಹ ಮಹತ್ವದ ಶೃಂಗಸಭೆಗಳಲ್ಲಿ ಅವರು ಯಾವ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ ಎಂಬುದನ್ನು ಪ್ರತಿ ದೇಶವು ನಿರ್ಧರಿಸುತ್ತದೆ ಮತ್ತು ಯಾರೂ ಅದರ ಅರ್ಥಗಳನ್ನು ಅತಿಯಾಗಿ ಓದಬಾರದು. ಆ ದೇಶ ಯಾವ ನಿಲುವು ತೆಗೆದುಕೊಂಡಿದೆ, ಆ ದೇಶವು ಚರ್ಚೆಗಳು ಮತ್ತು ಫಲಿತಾಂಶಗಳಿಗೆ ಎಷ್ಟು ಕೊಡುಗೆ ನೀಡಿದೆ ಎಂಬುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಅದಾಗ್ಯೂ ಜಿ20 ಶೃಂಗಸಭೆಯ ವಿವಿಧ ಫಲಿತಾಂಶಗಳಿಗೆ ಚೀನಾ ತುಂಬಾ ಬೆಂಬಲ ನೀಡುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.