ಕಾಸರಗೋಡು: ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ವರ್ಸಸ್ ಕೇರಳ ಸ್ಟೇಟ್ ಆಸ್ತಿ ಹಕ್ಕು ಸಂವಿಧಾನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟು ನೀಡಿದ್ದ ಐತಿಹಾಸಿಕ ತೀರ್ಪಿನ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದ ಉದ್ಘಾಟನೆ ಸೆ. 2ರಂದು ಬೆಳಗ್ಗೆ 9.30ಕ್ಕೆ ಶ್ರೀ ಎಡನೀರು ಮಠದಲ್ಲಿ ಜರುಗಲಿದೆ ಎಂದು ವರ್ಷಾಚರಣೆ ಸಮಿತಿ ಅಧ್ಯಕ್ಷ ವಕೀಲ ಎಂ. ನಾರಾಯಣ ಭಟ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟು ನ್ಯಾಯಾಧೀಶ, ನ್ಯಾಯಮೂರ್ತಿ ಸರಸ ವೆಂಕಟನಾರಾಯಣ ಸರಣಿಕಾರ್ಯಕ್ರಮ ಉದ್ಘಾಟಿಸುವರು. ಕೇರಳ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಎನ್ ನಗರೇಶ್ ದಿಕ್ಸೂಚಿ ಭಾಷಣ ಮಾಡುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ವಕೀಲರಾದ ಕೆ.ಎಂ ಆಚಾರ್ಯ, ಮುರಲೀಧರ ಬಳ್ಳಕ್ಕುರಾಯ ಪಾಲ್ಗೊಳ್ಳುವರು.
ಉದ್ಘಾಟನಾ ಸಮಾರಂಭದ ನಂತರ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ತೀರ್ಪಿನ ಪರಿಣಾಮಗಳು' ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯುವುದು. ಕರ್ನಾಟಕ ಹೈಕೋರ್ಟಿನ ಹಿರಿಯ ವಕೀಲ ಉದಯ್ ಹೊಳ್ಳ, ಕೇರಳ ಹೈಕೋರ್ಟಿನ ವಕೀಲ ಅಸಫ್ ಆಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ವಕೀಲರಾದ ಪೃಥ್ವೀರಾಜ್ ರೈ, ಮಣಿಕಂಠನ್ ನಂಬ್ಯಾರ್ ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಕೀಲರದ ಕೆ. ಮಹಾಲಿಂಗ ಭಟ್, ಗೋವಿಂದನ್ ನಾಯರ್, ಮಣಿಕಂಠನ್ ನಂಬ್ಯಾರ್ ಉಪಸ್ಥಿತರಿದ್ದರು.
ಏನಿದು ತೀರ್ಪು:
ಎಡನೀರು ಮಠದ ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ವರ್ಸಸ್ ಕೇರಳ ಸ್ಟೇಟ್ ಪ್ರಕರಣ(1975)ದಲ್ಲಿ 13ಮಂದಿ ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟಿನ ಪೀಠ ಆಸ್ತಿ ಹಕ್ಕು ಸಂವಿಧಾನಕ್ಕೆ ಸಂಬಂಧಿಸಿ ಮಹತ್ವದ ತೀರ್ಪನ್ನು ನೀಡಿತ್ತು. ಈ ತೀರ್ಪಿನ 50ನೇ ವರ್ಷಾಚರಣೆ ನಡೆಸುವ ನಿಟ್ಟಿನಲ್ಲಿಕಾಸರಗೊಡು, ಅವಿಭಜಿತ ದ,ಕ ಜಿಲ್ಲೆಯ ಕಾನೂನು ಕಾಲೇಜುಗಳು ಹಾಗೂ ವಕೀಲರ ಸಂಘಗಳನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ರಾಜ್ಯದ ವಿವಿಧೆಡೆ ಹಾಗೂ ದೆಹಲಿಯಲ್ಲೂ ಸಂಕಿರಣ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.





