ಕಾಸರಗೋಡು: ಐಸಿಎಆರ್-ಕೇಂದ್ರೀಯ ತೊಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ)ಕಾಸರಗೋಡು ಮತ್ತು ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ವಿಶ್ವ ತೆಂಗು ದಿನವನ್ನು ಸೆ. 2ರಂದು ಸಿಪಿಸಿಆರ್‍ಐನ ಪಿಜೆ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ. ಬಾಲಚಂದ್ರ ಹೆಬ್ಬಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಶ್ವ ತೆಂಗು ದಿನಾಚರಣೆಯನ್ನು ಬೆಳಗ್ಗೆ 10.30ಕ್ಕೆ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರತಿ ವರ್ಷ ವಿಶ್ವ ತೆಂಗು ಬೆಳೆಗಾರರ ದಿನವನ್ನು ಏಷ್ಯಾ ಮತ್ತು ಪೆಸಿಫಿಕ್‍ನ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಆಶ್ರಯದಲ್ಲಿ ಸೆ. 2ರಂದು ಆಚರಿಸಿಕೊಮಡು ಬರಲಾಗುತ್ತಿದೆ.
'ಇಂದಿನ ಮತ್ತು ಭವಿಷ್ಯದ ಪೀಳಿಗೆಗಾಗಿ ತೆಂಗಿನಕಾಯಿ ವಲಯವನ್ನು ಉಳಿಸಿಕೊಳ್ಳುವುದು' ಎಂಬುದು ಕೇಂದ್ರದ ಮುಕ್ಯ ವಿಷಯವಾಗಿದೆ. ಹವಾಮಾನ ಬದಲಾವಣೆ, ಕುಶಲ ಕಾರ್ಮಿಕರ ಕೊರತೆ, ಧಾರಣೆ ಕಡಿತ, ಹೆಚ್ಚಿನ ಉತ್ಪಾದನಾ ವೆಚ್ಚ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಯಂತಹ ಬೆದರಿಕೆಗಳನ್ನು ದೇಶದ ತೆಂಗು ವಲಯ ಎದುರಿಸುತ್ತಿದೆ ಎಂದು ತಿಳಿಸಿದರು.
ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್‍ನಿದ ತೆಂಗು ವಲಯದ ಎಫ್‍ಪಿಒಗಳನ್ನು ಪ್ರತಿನಿಧಿಸುವ 300 ಕ್ಕೂ ಹೆಚ್ಚು ರೈತರು ಭಾಗವಹಿಸುವರು. 25 ಕ್ಕೂ ಹೆಚ್ಚು ಸಂಸ್ಥೆಗಳು ಯಾ ಉದ್ಯಮಿಗಳು ತಂತ್ರಜ್ಞಾನ ಮತ್ತು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ, ಇದರಲ್ಲಿ ಎಫ್‍ಪಿಒಗಳಿಂದ ಕಲ್ಪರಸ ಮಾರ್ಕೆಟಿಂಗ್‍ನ ಯಶಸ್ವಿ ಮಾದರಿಗಳು, ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳು ಮತ್ತು ತಂತ್ರಜ್ಞಾನ ಪ್ರದರ್ಶನ ಮತ್ತು ಪ್ರದರ್ಶನ ಒಳಗೊಂಡಿದೆ. ಉದ್ಯಮಿಗಳನ್ನು ಗೌರವಿಸುವುದು, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಾರ್ಯಾಗಾರ ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಐಸಿಎಆರ್-ಸಿಪಿಸಿಆರ್‍ಐ ಸಮಾಜವಿಜ್ಞಾನ ಮುಖ್ಯಸ್ಥ ಡಾ. ಮುರಳೀಧರನ್, ಐಸಿಎಆರ್-ಸಿಪಿಸಿಆರ್‍ಐ ಮುಖ್ಯ ತಾಂತ್ರಿಕ ಅಧಿಕಾರಿ ಕೆ.ಶ್ಯಾಮ ಪ್ರಸಾದ್ ಉಪಸ್ಥಿತರಿದ್ದರು.





