ಕುಂಬಳೆ: ಪೆÇಲೀಸರನ್ನು ಕಂಡು ಪರಾರಿಯಾಗುವ ಯತ್ನದಲ್ಲಿದ್ದ ಕಾರು ಪಲ್ಟಿಯಾಗಿ ಬಾಲಕ ಮೃತಪಟ್ಟ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕುಂಬಳೆ ಠಾಣೆ ಎಸ್.ಐ ಮನೆಗೆ ಅಪರಿಚಿತ ತಂಡವೊಂದು ಬೈಕಲ್ಲಿ ತೆರಳಿ ಅವರ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡಿದೆ. ಎಸ್.ಐ ಪತ್ನಿ ತಂದೆ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಮನೆ ವಠಾರದ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಪತ್ತೆಯಾಗಿರುವ ಸ್ಕೂಟರ್ ಸವಾರರಿಬ್ಬರನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ.
ಬುಧವಾರ ಸಂಜೆ ಎಸ್.ಐ ರಜಿತ್ ಹಾಗೂ ಕುಟುಂಬ ವಾಸಿಸುತ್ತಿರುವ ಮೊಗ್ರಾಲಿನ ಮಾಳಯಂನಗರದ ಬಾಡಿಗೆ ಮನೆಗೆ ನೀಲಿ ಬಣ್ಣದ ಸ್ಕೂಟರಲ್ಲಿ ಆಗಮಿಸಿದ ತಂಡ ಎಸ್.ಐ ಹಾಗೂ ಅವರ ಕುಟುಂಬಕ್ಕೆ ಅವಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದೆ. ಈ ಬಗ್ಗೆ ಎಸ್.ಐ ರಜಿತ್ ಅವರ ಪತ್ನಿಯ ತಂದೆ ಕೊಲ್ಲಂ ನಿವಾಸಿ ಉಣ್ಣಿಕೃಷ್ಣನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರು ಪಲ್ಟಿಯಾಗಿ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಪೆರಾಲ್‍ಕಣ್ಣೂರು ನಿವಾಸಿ ದಿ. ಅಬ್ದುಲ್ಲ-ಸಫಿಯಾ ದಂಪತಿ ಪುತ್ರ ಫರಾಸ್(17)ಸಾವಿಗೀಡಾಗಿದ್ದನು. ಪೊಲೀಸರು ಹಿಂಬಾಲಿಸಿಹೋಗಿರುವುದರಿಂದ ಕಾರು ಪಲ್ಟಿಯಾಗಿದ್ದು, ವಿದ್ಯಾರ್ಥಿ ಸಾವಿಗೆ ಪೊಲೀಸರು ಕಾರಣರಾಗಿದ್ದಾರೆ. ಇವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮುಸ್ಲಿಂಲೀಗ್, ಯೂತ್ ಕಾಂಗ್ರೆಸ್, ಸಿಪಿಎಂ, ಎಸ್‍ಡಿಪಿಐ, ಯೂತ್‍ಲೀಗ್ ಸೇರಿದಂತೆ ವಿವಿಧ ಸಂಘಟನೆಗಳು ಠಾಣೆ ಎದುರು ಧರಣಿ ನಡೆಸುತ್ತಿರುವ ಮಧ್ಯೆ ಇಬ್ಬರು ಕಿಡಿಗೇಡಿಗಳು ಎಸ್.ಐ ಮನೆಗೆ ತೆರಳಿ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡಿದೆ.
ಘಟನೆಗೆ ಕಾರಣರೆನ್ನಲಾದ ಠಾಣೆ ಎಸ್.ಐಯನ್ನು ಬೆರೆಡೆಗೆ ವರ್ಗಾಯಿಸುವುದರ ಜತೆಗೆ ಇಬ್ಬರು ಪೊಲೀಸ್ ಕಾನ್‍ಸ್ಟೇಬಲ್‍ಗಳನ್ನು ಹೈವೇ ಪೆಟ್ರೋಲಿಂಗ್ ವಿಭಾಗಕ್ಕೆ ವರ್ಗಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಆದೇಶ ಹೊರಡಿಸಿದ್ದರು.
ಪೋಲೀಸರಿಗೇ ಬೆದರಿಕೆ:
ಪ್ರತಿಭಟನೆ ಹಿನ್ನೆಲೆಯಲ್ಲಿ ಠಾಣೆಯ ಎದುರು ಪೋಲೀಸರು ಹಾಕಿದ ಬ್ಯಾರಿಕೇಡ್ ಗಳನ್ನು ದಿನವಿಡೀ ತೆಗೆಯದೆ ಪೋಲೀಸರು ಪುಕ್ಕಲುತನ ತೋರಿಸಿದ್ದಾರೆ ಎಂದು ಹೇಳಲಾಗಿದೆ. 100 ರಷ್ಟು ಮಂದಿಗಳಿರುವ ಪೋಲೀಸರು 10-15 ಮಂದಿ ಪ್ರತಿಭಟನಕಾರರಿಗೆ ಬೆದರಿದರೇ ಎಂಬ ಶಂಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಬಾಲಕನ ಕಾರಣ ನೀಡಿ ಕಿಡಿಗೇಡಿಗಳು ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.





