ನವದೆಹಲಿ: ಜಿ20 ಶೃಂಗಸಭೆಯ ಸಂದರ್ಭದಲ್ಲಿ ಘೋಷಿಸಿರುವ 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' (ಐಎಂಇಸಿ) ಯೋಜನೆಯು ಮುಂದಿನ ಶತಮಾನಗಳಲ್ಲಿ ವಿಶ್ವ ವ್ಯಾಪಾರದ ಬುನಾದಿಯಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
0
samarasasudhi
ಸೆಪ್ಟೆಂಬರ್ 25, 2023
ನವದೆಹಲಿ: ಜಿ20 ಶೃಂಗಸಭೆಯ ಸಂದರ್ಭದಲ್ಲಿ ಘೋಷಿಸಿರುವ 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' (ಐಎಂಇಸಿ) ಯೋಜನೆಯು ಮುಂದಿನ ಶತಮಾನಗಳಲ್ಲಿ ವಿಶ್ವ ವ್ಯಾಪಾರದ ಬುನಾದಿಯಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಯೋಜನೆಯ ರೂಪುರೇಷೆಗಳು ಭಾರತದಲ್ಲಿ ಜನ್ಮತಾಳಿದವು ಎಂಬುದನ್ನು ಇತಿಹಾಸವು ನೆನಪಿನಲ್ಲಿ ಇಟ್ಟುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. 'ಶೃಂಗಸಭೆಯ ಸಂದರ್ಭದಲ್ಲಿ ಪ್ರಸ್ತಾಪಿಸಲಾದ ಈ ಕಾರಿಡಾರ್ ನೂರಾರು ವರ್ಷಗಳವರೆಗೆ ವಿಶ್ವ ವ್ಯಾಪಾರದ ಬುನಾದಿಯಾಗಿರಲಿದೆ' ಎಂದು ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಈ ಕಾರಿಡಾರ್ ಸ್ಥಾಪನೆಯ ಪ್ರಸ್ತಾವ ಮಾಡಿದ್ದು ಭಾರತ ಎಂದು ಅವರು ತಿಳಿಸಿದ್ದಾರೆ. ಸಮುದ್ರ ಮಾರ್ಗ, ರೈಲು ಮಾರ್ಗ ಮತ್ತು ರಸ್ತೆಯ ಮೂಲಕ ಭಾರತವನ್ನು ಏಷ್ಯಾದ ಪಶ್ಚಿಮ ಭಾಗ ಹಾಗೂ ಯುರೋಪಿನ ಜೊತೆ ಸರಕು ಸಾಗಣೆಗೆ ಬೆಸೆಯುವ ಮಹತ್ವಾಕಾಂಕ್ಷಿ ಯೋಜನೆ ಇದು. ಭಾರತ, ಅಮೆರಿಕ, ಸೌದಿ ಅರೇಬಿಯಾ, ಐರೋಪ್ಯ ಒಕ್ಕೂಟ, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ ಈ ಕಾರಿಡಾರ್ ಯೋಜನೆಯಲ್ಲಿ ಭಾಗಿಯಾಗಿವೆ.
ಆಫ್ರಿಕದ ದೇಶಗಳ ಒಕ್ಕೂಟಕ್ಕೆ ಜಿ20 ಗುಂಪಿನ ಪೂರ್ಣ ಸದಸ್ಯತ್ವ ಕೊಡಿಸಲು ಭಾರತ ತಳೆದ ನಿಲುವನ್ನು ಮೋದಿ ಅವರು ಪ್ರಶಂಸಿಸಿದ್ದಾರೆ. ಭಾರತವು ಜಿ20 ಗುಂಪಿನ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಅವಧಿಯಲ್ಲಿ ಅಭಿವೃದ್ಧಿಶೀಲ ದೇಶಗಳ ಧ್ವನಿ ತಾನು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದೆ.
ಕರ್ನಾಟಕದ ಹೊಯ್ಸಳರ ಕಾಲದ ದೇವಸ್ಥಾನಗಳನ್ನು ಹಾಗೂ ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನು ಯುನೆಸ್ಕೊ ಸಂಸ್ಥೆಯು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಿರುವುದು ಹೆಮ್ಮೆಯ ಸಂಗತಿ ಎಂದು ಮೋದಿ ಅವರು ಹೇಳಿದ್ದಾರೆ. ಜಿ20 ಶೃಂಗಸಭೆ ಹಾಗೂ ಚಂದ್ರಯಾನ-3 ಯೋಜನೆಯ ಯಶಸ್ಸು ಭಾರತದ ಪ್ರಜೆಗಳ ಸಂತಸವನ್ನು ದುಪ್ಪಟ್ಟು ಮಾಡಿವೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 1ರಂದು ಸ್ವಚ್ಛತಾ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತದೆ. ಸಾರ್ವಜನಿಕರು ತಮ್ಮ ನೆರೆಹೊರೆಯಲ್ಲಿ ಈ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದು ಅವರು ಕರೆ ನೀಡಿದ್ದಾರೆ.