ಪೆರ್ಲ : ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹಾನುಭಾವರ ಆದರ್ಶಪಾಲನೆ, ಅವರಿಗೆ ಸಲ್ಲುವ ನೈಜ ಪೂಜೆಯಾಗಿದೆ ಎಂಬುದಾಗಿ ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್ ಬಾಡೂರು ತಿಳಿಸಿದ್ದಾರೆ. ಅವರು ಪೆರ್ಲ ಪಡ್ರೆ ಸಭಾ ಭವನದಲ್ಲಿ ಜರುಗಿದ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಪೆರ್ಲ ಘಟಕ ವತಿಯಿಂದ ನಡೆದ ಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಅಸ್ಪøಶ್ಯತೆ ವಿರುದ್ಧ ಹೋರಾಟ ನಡೆಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾದ ಶ್ರೀ ನಾರಾಯಣಗುರುಗಳು ಈ ನಾಡು ಕಂಡ ಶ್ರೇಷ್ಠ ಹಾಗೂ ಮಹಾನ್ ದಾರ್ಶನಿಕರಾಗಿದ್ದಾರೆ. ಶಿಕ್ಷಣ, ಸಂಘಟನೆಗಳಿಂದ ಸಮಾಜದಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯ ಎಂಬುದನ್ನು ಬ್ರಹ್ಮಶ್ರೀ ನಾರಾಯಣಗುರುಗಳು ಈ ನಾಡಿಗೆ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಸಮಾಜದ ಎಲ್ಲ ವರ್ಗದ ಜನರಿಗೆ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಸಮಾಜದ ಮುಖಂಡರಾದ ನಿವೃತ್ತ ಪ್ರಾಂಶುಪಾಲ ಸುನೀತ್ ಕುಮಾರ್ ಡಿ., ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಚನಿಯಪ್ಪ ಪೂಜಾರಿ ಅಲಾರು, ನಿವೃತ್ತ ಅಧ್ಯಾಪಕ ಶಿವಪ್ಪ ಪೂಜಾರಿ, ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ಪೂಜಾರಿ, ಸಂಘಟನಾ ಕಾರ್ಯದರ್ಶಿ ಸಂಕಪ್ಪ ಸುವರ್ಣ ಬಾಡೂರು, ಶ್ರೀ ನಾರಾಯಣ ಗುರು ಮಹಿಳಾ ಸಂಘದ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ, ಪ್ರಾದೇಶಿಕ ಸಮಿತಿಗಳ ಅಧ್ಯಕ್ಷರಾದ ಶಂಕರ ಖಂಡಿಗೆ, ಸತೀಶ್ ಕೊಲ್ಯ, ಕೃಷ್ಣಪ್ಪ ಮಾಸ್ಟರ್ ನಡುಬೈಲು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಖಿಲೇಶ್ ಕಾನ ಸ್ವಾಗತಿಸಿದರು. ನಾರಾಯಣ ಮಾಸ್ಟರ್ ಕುದ್ವ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪದ್ಮನಾಭ ಸುವರ್ಣ ಅಭಿನಂದನಾ ಪತ್ರ ವಾಚಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ರಘುರಾಮ್ ವಂದಿಸಿದರು.
ಈ ಸಂದರ್ಭ ಕೇರಳ ಸರ್ಕಾರದ ಸೇವಾ ಪದಕ ಪುರಸ್ಕøತ ಬದಿಯಡ್ಕ ಸಿವಿಲ್ ಎಕ್ಸೈಸ್ ಆಫೀಸರ್ ಮೋಹನ ಕುಮಾರ್ ಬೆದ್ರಂಪಳ್ಳ, ಪತ್ರಕರ್ತ ಪುರುಷೋತ್ತಮ ಪೆರ್ಲ ಅವರನ್ನು ಸನ್ಮಾನಿಸಲಾಯಿತು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಮೇಶ್ ನಡುಬೈಲು ಇವರನ್ನು ಅಭಿನಂದಿಸಲಾಯಿತು. ಕಳೆದ ಸಾಲಿನ ಎಸ್ಸೆಸೆಲ್ಸಿ ಹಾಗೂ ಪ್ಲಸ್ ಟು ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.ಸಮಾರಂಭದಲ್ಲಿ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.





