ಕುಂಬಳೆ: ಭಾರತದ ಸಂವಿಧಾನದ ಆಶಯಗಳು ಮತ್ತು ಸನಾತನ ಧರ್ಮದ ವಿವಿಧ ಮೌಲ್ಯಗಳ ರಕ್ಷಣೆÀ ಹಾಗೂ ಸಾಮಾಜಿಕ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿರುವ ಕಾಸರಗೋಡಿನ ಸಮಾನ ಮನಸ್ಕರ ಸಂಘಟನೆಯಾದ ಸರ್ದಾರ್ ಪಟೇಲ್ ಸಾಂಸ್ಕೃತಿಕ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಕುಂಬಳೆ ಕುಂಟಂಗೇರಡ್ಕ ಕುಪ್ಪೆ ಪಂಜುರ್ಲಿ ದೈವ ಕ್ಷೇತ್ರದ ಸಮೀಪದಲ್ಲಿರುವ ರಾಜೀವ ಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ರಕ್ಷಾಬಂಧನದ ಸಂದೇಶವನ್ನು ನೀಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಎ. ಶ್ರೀನಾಥ್ ಅವರು ಪುರಾಣ, ಇತಿಹಾಸಗಳಲ್ಲಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಕ್ಷಾಬಂಧನದ ಮಹತ್ವದ ಬಗ್ಗೆ ಉಲ್ಲೇಖಿಸಿ ಭಾರತೀಯ ಸಂಸ್ಕೃತಿಯ ಜೊತೆಗೆ ಬಾವೈಕ್ಯತೆಯ ರಕ್ಷಣೆ ಆಗಬೇಕು ಎಂಬುದನ್ನು ಒತ್ತು ನೀಡಲು ಈ ಆಚರಣೆ ದಿಕ್ಸೂಚಿಯಾಗಿದೆ ಎಂದರು.
ಎಣ್ಮಕಜೆ ಪಂಚಾಯತಿ ಅಧ್ಯಕ್ಷ, ಸಾಮಾಜಿಕ ಧಾರ್ಮಿಕ ಮುಂದಾಳು ಸೋಮಶೇಖರ್ ಜೆ. ಎಸ್. ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ನಮ್ಮ ದೇಶವನ್ನು ಕಾಡುತ್ತಿರುವ ಜನಾಂಗವಾದ, ಕೋಮುವಾದ ಮತ್ತು ಭಯೋತ್ಪಾದನೆಯಿಂದ ರಕ್ಷಿಸಲು ನಾವೆಲ್ಲರೂ ಪಣತೊಡಬೇಕೆಂದು ಆಗ್ರಹಿಸಿದರು.
ಪರಿಸರದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹೋದರ ಸಹೋದರಿಯ ಭಾವೈಕ್ಯದ ರಕ್ಷೆಯನ್ನು ಕಟ್ಟಿ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಧಾರ್ಮಿಕ ಮುಖಂಡರುಗಳಾದ ಲೋಕನಾಥ್ ಶೆಟ್ಟಿ ಉಜಾರು, ರವಿ ಪೂಜಾರಿ ಕೋಟೆಕಾರು, ಚಂದ್ರ ಕಾಜೂರು, ಮೋಹನ್ ರೈ ಪೈವಳಿಕೆ, ಕೇಶವ ಪುತ್ತಿಗೆ, ರವಿರಾಜ್ ಕುಂಟಂಗೇರಡ್ಕ ಮುಂತಾದವರು ಭಾಗವಹಿಸಿ ರಕ್ಷಾಬಂಧನದ ಸಂದೇಶವನ್ನು ನೀಡಿದರು. ದಿಲೀಪ್ ರಾಜ ಪೂಜಾರಿ, ದಯಾನಂದ ಬಾಡೂರು, ಬಾಲಕೃಷ್ಣ ಬಾಡೂರು ವಂದೇ ಮಾತರಂ ಹಾಡಿದರು. ಬಾಲಕೃಷ್ಣ ಬಾಡೂರು ಸ್ವಾಗತಿಸಿ, ಪೃಥ್ವಿರಾಜ್ ಶೆಟ್ಟಿ ಅವರು ಸರ್ದಾರ್ ಪಟೇಲ್ ಸಾಂಸ್ಕೃತಿಕ ಸಂಘದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಮನುರಾಜ್, ಅನೀಶ್, ಪ್ರಮೋದ್ ರಾಜ್, ರಾಜೇಶ್ ಮುಂತಾದವರು ಸಹಕರಿಸಿದರು. ದಯಾನಂದ ಬಾಡೂರು ವಂದಿಸಿದರು.




.jpg)
