ಎರ್ನಾಕುಳಂ: ಅಪ್ರಾಪ್ತರಿಗೆ ಮದ್ಯ ನೀಡಿದ ಪ್ರಕರಣದಲ್ಲಿ ಬೆವ್ಕೋ ಮಳಿಗೆ ನೌಕರರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಮದ್ಯ ಮಾರಾಟ ಮಾಡಬಾರದೆಂಬ ನಿಯಮ ಉಲ್ಲಂಘಿಸಿದ ಮುವಾಟುಪುಳ ಬಿವರೇಜ್ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ. ಮಕ್ಕಳು ನದಿಯ ದಡದಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೋಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಆಗಸ್ಟ್ 25 ರಂದು ನಡೆದಿತ್ತು. ಶಾಲೆಯ ಓಣಂ ಆಚರಣೆಯ ನಂತರ ಮಕ್ಕಳು ನದಿಯ ದಡದಲ್ಲಿ ಕುಳಿತು ಮದ್ಯಪಾನ ಮಾಡಿದರು. ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳ ದೃಶ್ಯಾವಳಿಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪೋಲೀಸರು ಮಧ್ಯ ಪ್ರವೇಶಿಸಿದ್ದಾರೆ. ದೃಶ್ಯಾವಳಿಗಳನ್ನು ಆಧರಿಸಿ, ಪೋಲೀಸರು ಘಟನೆಯಲ್ಲಿ ಭಾಗಿಯಾಗಿರುವ ಕೆಲವು ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದರು. ನಂತರ ಕೆಲ ಸಹಪಾಠಿಗಳು ಮದ್ಯ ನೀಡಿರುವುದು ಪೋಲೀಸರಿಗೆ ತನಿಖೆಯಿಂದ ಬೆಳಕಿಗೆ ಬಂದಿತು. ನಂತರದ ತನಿಖೆಯಲ್ಲಿ ಮುವಾಟ್ಟುಪುಳ ಬಿವರೇಜ್‍ನಿಂದ ಮದ್ಯ ಖರೀದಿಸಿರುವುದು ಪತ್ತೆಯಾಗಿದೆ.
ಅಬಕಾರಿ ನಿಯಮದ ಪ್ರಕಾರ 18 ವರ್ಷದೊಳಗಿನವರಿಗೆ ಮದ್ಯ ನೀಡಬಾರದು. ಇದೇ ವೇಳೆ ಅಪ್ರಾಪ್ತರಿಗೆ ಮದ್ಯ ನೀಡಿಲ್ಲ ಎಂದು ಸಿಬ್ಬಂದಿ ಪೋಲೀಸರಿಗೆ ತಿಳಿಸಿದ್ದಾರೆ. ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ಮಕ್ಕಳಿಗೆ ಮದ್ಯ ನೀಡುವುದರ ಹಿಂದೆ ಮಧ್ಯವರ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆಯೂ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.





