ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ 1031 ಮಂದಿಯ ಹೆಸರನ್ನು ಮರುಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಸಂತ್ರಸ್ತರ ತಾಯಂದಿರು, ಎಂಡೋಸಲ್ಫಾನ್ ಮುಷ್ಕರ ಸಮಿತಿ ಪದಾಧಿಕಾರಿಗಳು ಬೆಳಗ್ಗಿನಿಂದ ಸಂಜೆ ವರೆಗೆ ಸತ್ಯಾಗ್ರಹ ನಡೆಸಿದರು. ಎಂಡೋಸಲ್ಪಾನ್ ಸಂತ್ರಸ್ತರ ಪಟ್ಟಿಗೆ ಬಾಕಿ ಉಳಿದಿರುವ 1031ಮಂದಿಯ ಹೆಸರನ್ನು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಖ್ಯಾತ ಬರಹಗಾರ, ನಿವೃತ್ತ ಪ್ರಾಧ್ಯಾಪಕ ಅಂಬಿಕಾಸುತನ್ ಮಾಙËಡ್ ಸತ್ಯಾಗ್ರಹ ಉದ್ಘಾಟಿಸಿದರು. ಸಮಾಜಸೇವಕ ಡಾ. ಸುರೇಂದ್ರನಾಥ್, ಸುಬೈರ್ ಪಡ್ಪು ಸೇರಿದಂತೆ ಎಂಡೋಸಲ್ಫಾನ್ ಮುಷ್ಕರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
2017 ಏ. 5ರಿಂದ 9ರ ವರೆಗೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಸಲಾದ ವಿಶೇಷ ವೈದ್ಯಕೀಯ ಶಿಬಿರದಲ್ಲಿ 1905ಮಂದಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಪತ್ತೆಹಚ್ಚಲಾಗಿದ್ದು, ಇವರಲ್ಲಿ 287ಮಂದಿಯನ್ನು ಮಾತ್ರ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ನಡೆಸಿದ ಹೋರಾಟದನ್ವಯ ಮೊದಲ ಹಂತದಲ್ಲಿ 76ಮಂದಿಯನ್ನು ಮತ್ತೆ ಸಹಾಗೂ 2019 ಜನವರಿ 30ರಂದು ರಾಜ್ಯ ಸೆಕ್ರೆಟೇರಿಯೆಟ್ ಎದುರು ಸಂತ್ರಸ್ತರ ತಾಯಂದಿರು ನಡೆಸಿದ ಧರಣಿಸತ್ಯಾಗ್ರಹದ ಹಿನ್ನೆಲೆಯಲ್ಲಿ 18ವರ್ಷದೊಳಗಿನ 511ಮಂದಿಯನ್ನು ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. 1031ಮಂದಿ ಇನ್ನೂ ಯಾದಿಯಿಂದ ಹೊರಗುಳಿದಿದ್ದು, ಸರ್ಕಾರದ ಅಗತ್ಯ ಸವಲತ್ತೂ ಇವರಿಗೆ ಲಭ್ಯವಾಗುತ್ತಿಲ್ಲ. ಎಂಡೋಸಲ್ಫಾನ್ ಬಾಧಿತ ಇತರ ಸಂತ್ರಸ್ತರಂತೆ ಇವರು ದುರಿತ ಅನುಭವಿಸುತ್ತಿದ್ದರೂ, ಪಟ್ಟಿಯಿಂದ ಹೊರಗುಳಿದಿರುವುದರಿಂದ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬೇಕಾಗಿದೆ. ಕೆಲವು ಕುಟುಂಬ ಸಂತ್ರಸ್ತ ಮಕ್ಕಳ ಆರೋಗ್ಯ, ಆಹಾರ, ಕುಟುಂಬದ ದೈನಂದಿನ ಖರ್ಚುವೆಚ್ಚಗಳಿಗೂ ಪರದಾಡಬೇಕಾದ ಸ್ಥಿತಿಯಿದೆ. ಬಾಕಿ ಉಳಿದಿರುವ 1031ಮಂದಿಯನ್ನು ಮತ್ತೆ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಲಾಯಿತು.

