ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ಕಾಸರಗೋಡು ಜಿಲ್ಲಾಧಿಕಾರಿಗೆ ಆದೇಶ ನೀಡಿದೆ. ಈ ಮೂಲಕ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ತಿರುವನಂತಪುರ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ನಿರ್ಮಿಸಿಕೊಟ್ಟಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಸರ್ಕಾರ ತೋರುತ್ತಿರುವ ವಿಳಂಬ ಧೋರಣೆಗೆ ಚುರುಕುಮುಟ್ಟಿಸಿದೆ.
ಎಣ್ಮಕಜೆ ಪಂಚಾಯಿತಿಯ ಬಜಕುಡ್ಲು ಕಾನ ಪ್ರದೇಶದಲ್ಲಿ 36ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಕಾಮಗಾರಿ ನಡೆಯುತ್ತಿದ್ದಲ್ಲಿ 2019ರ ವೇಳೆಗೆ ಎಂಡೋ ಸಂತ್ರಸ್ತರಿಗೆ ಮನೆಗಳು ಹಸ್ತಾಂತರಗೊಳ್ಳಬೇಕಾಗಿತ್ತು. ಸರ್ಕಾರ ಮಂಜೂರುಗೊಳಿಸಿಕೊಟ್ಟಿರುವ ಜಾಗದಲ್ಲಿ ಟ್ರಸ್ಟ್ ಮನೆ ನಿರ್ಮಿಸಿಕೊಡುವುದಾಗಿಯೂ, ವಿದ್ಯುತ್, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಸರ್ಕಾರ ಒದಗಿಸಿಕೊಡಬೇಕೆಂಬ ಒಪ್ಪಂದದನ್ವಯ ಯೋಜನೆ ಜಾರಿಗೊಳಿಸಲಾಗಿತ್ತು. ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಮನೆಯ ಕೀಲಿಕೈ ಇದುವರೆಗೆ ಹಸ್ತಾಂತರಗೊಳ್ಳಲೇ ಇಲ್ಲ. ಮನೆಗಳು ಕಾಡು ಬೆಳೆದು ಶಿಥಿಲಾವಸ್ಥೆ ತಲುಪುವಂತಾಗಿತ್ತು. ಮನೆಯ ಕಿಟಿಕಿ ಬಾಗಿಲುಗಳೂ ಕಳಚಿಬೀಳುವ ಅಂಚಿಗೆ ತಲುಪಿತ್ತು. ಭೂತ ಬಂಗಲೆಯಂತಾಗಿದ್ದ ಈ ಪ್ರದೇಶವನ್ನು ಎಣ್ಮಕಜೆ ಪಂಚಾಯಿತಿ ವತಿಯಿಂದ ಕುಟುಂಬಶ್ರೀ, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿದಂತೆ ಹಲವರು ಮಂದಿಯ ಶ್ರಮದಾನದ ಮೂಲಕ ಶುಚೀಕರಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಮಧ್ಯ ಪ್ರವೇಶದಿಂದ ರಸ್ತೆಗೆ ಡಾಂಬರೀಕರಣ, ವಿದ್ಯುತ್ ಕಂಬ ಅಳವಡಿಸಿ ತಂತಿ ಎಳೆಯುವ ಕಾರ್ಯ, ಗೋಳಿತ್ತಡ್ಕದಿಂದ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾರ್ಯ ನಡೆದಿತ್ತು.
ನ್ಯಾಯಾಲಯ ಮಧ್ಯ ಪ್ರವೇಶ:
ಎಂಡೋ ಸಂತ್ರಸ್ತರಿಗಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸದಿರುವ ಬಗ್ಗೆ ನ್ಯಾಯಾಲಯ ಮಧ್ಯ ಪ್ರವೇಶಿಸಿಸಬೇಕಾಗಿ ಬಂದಿದೆ. ಮನೆಗಳ ನಿರ್ಮಾಣಕಾರ್ಯ ನಡೆದು ಐದು ವರ್ಷ ಸಮೀಪಿಸುತ್ತಿದ್ದರೂ, ಇದುವರೆಗೆ ಮೂಲಸೌಕರ್ಯ ಒದಗಿಸಲಾಗದಿರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ತಾವು ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ. ಸಕಾಲಕ್ಕೆ ಮೂಲ ಸೌಕರ್ಯ ಒದಗಿಸದಿರುವುದರಿಂದ ಮನೆ ಕೀಲಿಕೈ ಹಸ್ತಾಂತರಿಸಲಾಗದ ಸ್ಥಿತಿಯಿದೆ. ಅಲ್ಲದೆ ಮನೆಗಳ ಹಸ್ತಾಂತರ ವಿಳಂಬವಾಗಿರುವುದರಿಂದ ಶಿಥಿಲಾವಸ್ಥೆ ತಲುಪಿರುವ ಮನೆಗಳ ದುರಸ್ತಿಗಾಗಿ 24ಲಕ್ಷ ರೂ. ವೆಚ್ಚ ತಗುಲಲಲಿದ್ದು, ಈ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳುವಂತೆ ಟ್ರಸ್ಟ್ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ಹೈಕೋರ್ಟಿ ಮೊರೆಹೋಗಿತ್ತು. ಮೂಲ ಸೌಕರ್ಯ ಒದಗಿಸಿಕೊಟ್ಟು, ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವಂತೆಯೂ ಅರ್ಜಿ ಪರಿಗಣಿಸಿದ ಹೈಕೋರ್ಟು ನ್ಯಾಯಾಧೀಶ ಜಸ್ಟಿಸ್ ದೇವನ್ ರಾಮಚಂದ್ರನ್ ಆದೇಶ ನೀಡಿದ್ದಾರೆ.






