HEALTH TIPS

ಎಸ್‌ಸಿಒ ರಾಷ್ಟ್ರಗಳ ಮುಖಂಡರ ಸಭೆ: ಗಡಿಗೆ ಮಾನ್ಯತೆ, ಪರಸ್ಪರ ಪ್ರಗತಿಗೆ ನೆರವು

                  ಬಿಷ್ಕೆಕ್,: 'ಅಂತರರಾಷ್ಟ್ರೀಯ ಕಾಯ್ದೆಗೆ ಬದ್ಧವಾಗಿ ಭೌಗೋಳಿಕ ಗಡಿ, ಆಯಾ ದೇಶದ ಸಾರ್ವಭೌಮತೆ ಗೌರವಿಸುವ ಮೂಲಕ ಸ್ಥಿರತೆ, ಪ್ರಗತಿಗೆ ಶ್ರಮಿಸಬೇಕು' ಎಂದು ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸದಸ್ಯ ರಾಷ್ಟ್ರಗಳಿಗೆ ಭಾರತ ಕರೆ ನೀಡಿದೆ.

              ಗುರುವಾರ ಇಲ್ಲಿ ನಡೆದ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ 22ನೇ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್, 'ಈ ಮೂಲಕ ಸದಸ್ಯ ರಾಷ್ಟ್ರಗಳು ಪರಸ್ಪರ ಆರ್ಥಿಕ ಸಹಕಾರ, ಎಸ್‌ಸಿಒ ಈ ವಲಯದ ಸ್ಥಿರತೆ ಮತ್ತು ಅಭ್ಯುದಯಕ್ಕೆ ಒತ್ತು ನೀಡಬೇಕು.

ಕೇಂದ್ರ ಏಷ್ಯಾದ ರಾಷ್ಟ್ರಗಳ ಪಾತ್ರವು ಈ ನಿಟ್ಟಿನಲ್ಲಿ ನಿರ್ಣಾಯಕವಾಗಿದೆ' ಎಂದು ಹೇಳಿದರು.

               ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಭಿವೃದ್ಧಿಪಡಿಸಲು ಚೀನಾ ದೊಡ್ಡ ಮೊತ್ತವನ್ನು ವಿನಿಯೋಗಿಸುತ್ತಿದೆ. ಈ ಯೋಜನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾದುಹೋಗಲಿದೆ ಎಂಬ ಕಾರಣಕ್ಕೆ ಭಾರತ ಇದನ್ನು ಕಟುವಾಗಿ ವಿರೋಧಿಸುತ್ತಿದೆ.

                ಭಾರತ, ಇರಾನ್, ಕಜಕಿಸ್ತಾನ, ಚೀನಾ, ಕಿರ್ಗಿ ಗಣರಾಜ್ಯ, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ, ಉಜ್ಬೆಕಿಸ್ತಾನ ಎಸ್‌ಸಿಒ ಸದಸ್ಯ ರಾಷ್ಟ್ರಗಳು. ಭಾರತವು ಎಸ್‌ಸಿಒ ವಲಯದ ದೇಶಗಳ ಜೊತೆಗೆ ಉತ್ತಮ ನಾಗರಿಕ ಬಾಂಧವ್ಯವನ್ನು ಹೊಂದಿದೆ ಎಂದು ಜೈಶಂಕರ್‌ ಹೇಳಿದರು.

                'ಈ ವಲಯದಲ್ಲಿ ಜನರ ಪರಸ್ಪರ ರಾಷ್ಟ್ರಗಳಲ್ಲಿ ಸಂಚಾರ, ಸರಕುಗಳ ಸಾಗಣೆಯು ನಮ್ಮ ಆಚರಣೆ, ಸಂಪ್ರದಾಯ, ಭಾಷೆ, ಸಂಸ್ಕೃತಿಯ ಮೇಲೆ ತನ್ನದೇ ಛಾಯೆ ಮೂಡಿಸಿದೆ. ಐತಿಹಾಸಿಕವಾದ ಈ ಬಾಂಧವ್ಯವು ಹೆಚ್ಚಿನ ಆರ್ಥಿಕ ಸಹಕಾರಕ್ಕೆ ನೆರವಾಗಬೇಕು' ಎಂದು ಹೇಳಿದರು.

               ಎಸ್‌ಸಿಒ ವಲಯದಲ್ಲಿ ವಾಣಿಜ್ಯ ಮತ್ತು ವಹಿವಾಟು ಉತ್ತಮ‍ಪಡಿಸಲು ಸಂಪರ್ಕ, ಮೂಲಭೂತ ಸೌಲಭ್ಯಗಳನ್ನು ಉತ್ತಮಪಡಿಸಬೇಕಾಗಿದೆ. ಇಂಥ ಸಂದರ್ಭಗಳಲ್ಲೂ ಆಯಾ ದೇಶದ ಭೌಗೋಳಿಕ ಗಡಿ ಮತ್ತು ಸಾರ್ವಭೌಮತೆ ಗೌರವಿಸುವುದು ಅಗತ್ಯವಾಗಿದೆ ಎಂದರು.

             ಭಾರತ- ಮಧ್ಯಪ್ರಾಚ್ಯ -ಯೂರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಮತ್ತು ಅಂತರ ರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್‌ಎಸ್‌ಟಿಸಿ) ಈ ವಲಯದ ಗಣನೀಯ ಪ್ರಗತಿಗೆ ನೆರವಾಗಬಹುದು ಎಂದು ಅವರು ಆಶಿಸಿದರು.

               ಐಎಂಇಸಿ ಯೋಜನೆಯನ್ನು ಭಾರತ, ಸೌದಿ ಅರೇಬಿಯ, ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಯೂನಿಯನ್ ಜಂಟಿಯಾಗಿ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಜಿ20 ಶೃಂಗದಲ್ಲಿ ಪ್ರಕಟಿಸಿದ್ದವು.

              ಐಎನ್‌ಎಸ್‌ಟಿಸಿ ಯೋಜನೆಯು ಒಟ್ಟು 7,200 ಕಿ.ಮೀ ಉದ್ದದ್ದಾಗಿದೆ. ಹಡಗು, ರೈಲು, ರಸ್ತೆ ಮಾರ್ಗಳನ್ನು ಒಳಗೊಂಡಿದೆ. ಭಾರತ, ಇರಾನ್, ಅಜೆರ್ಬೈಜಾನ್, ರಷ್ಯಾ, ಕೇಂದ್ರ ಏಷ್ಯಾ ಮತ್ತು ಯೂರೋಪ್‌ಗೆ ಸಂಪರ್ಕ ಕಲ್ಪಿಸಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries