ಕಾಸರಗೋಡು: ಸಾಲದ ಹಣ ವಾಪಾಸುಮಾಡದೆ, ಅಮಾನ್ಯ ಚೆಕ್ ನೀಡಿ ವಂಚಿಸಿರುವುದಾಗಿ ಆರೋಪಿಸಿ ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ವಿರುದ್ಧ ಕೇರಳ ಕಾಂಗ್ರೆಸ್ ಮುಖಂಡ, ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಐಕ್ಯರಂಗ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಪಿ ಜೋಸೆಫ್ ಅವರು ಕಾಕನಾಡ್ ಜ್ಯುಡಿಶೀಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಿರುವ ನ್ಯಾಯಾಲಯ ಡಿ. 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಕಳುಹಿಸಿದೆ.
2022 ನವೆಂಬರ್ 28ರಂದು ಎರಡು ಬಾರಿಯಾಗಿ ಬ್ಯಾಂಕ್ ಖಾತೆ ಮೂಲಕ ಪಿ.ಕೆ ಫೈಸಲ್ ಅವರು ಕೇರಳ ಕಾಂಗ್ರೆಸ್ ಮುಖಂಡ ಎಂ.ಪಿ ಜೋಸೆಫ್ ಅವರಿಂದ ಒಂದು ತಿಂಗಳ ಕಾಲಾವಧಿಗೆ ಹತ್ತು ಲಕ್ಷ ರೂ. ಸಾಲ ಪಡೆದಿದ್ದು, ಇದರಲ್ಲಿ ಐದು ಲಕ್ಷ ರೂ. ವಾಪಾಸು ಮಾಡಿದ್ದಾರೆ. ಬಾಕಿ ಐದು ಲಕ್ಷ ರೂ. ವಾಪಾಸು ಮಾಡದಿರುವುದರಿಂದ ಪಿ.ಕೆ ಫೈಸಲ್ ವಿರುದ್ಧ ವಕೀಲ ನಿತೀಶ್ ಶೆಬಾಯ್ ಎಂಬವರ ಮೂಲಕ ಜೋಸೆಫ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.

