ಕುಂಬಳೆ: ಮಂಗಲ್ಪಾಡಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಬಾಕಿ ಉಳಿದಿರುವ ನೂರಾರು ಕಡತಗಳನ್ನು ಕೂಡಲೇ ಪರಿಹರಿಸಲು ಕ್ರಮಕೈಗೊಳ್ಳುವಂತೆ ಪಂಚಾಯತಿ ಆಡಳಿತ ಮಂಡಳಿಯು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕಚೇರಿಯಲ್ಲಿ ಸುಮಾರು 3500 ಕಡತಗಳು ಬಾಕಿ ಉಳಿದಿವೆ. ಸಿಬ್ಬಂದಿ ಕೊರತೆಯಿಂದ 2017ರ ಬಳಿಕದ ಕಡತಗಳು ಬಗೆಹರಿದಿಲ್ಲ. 100 ಸಂಕೀರ್ಣ ಕಡತಗಳನ್ನು ಬದಿಗಿಟ್ಟು, ಉಳಿದವುಗಳಿಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಈ ಬೇಡಿಕೆ ಮುಂದಿಟ್ಟುಕೊಂಡು ಆಡಳಿತ ಮಂಡಳಿ ನಡೆಸುತ್ತಿರುವ ಮುಷ್ಕರಕ್ಕೆ ಜನಬೆಂಬಲ ವ್ಯಕ್ತವಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಬೆಂಬಲ ಘೋಷಿಸಿ ಧರಣಿ ವೇದಿಕೆಗೆ ಆಗಮಿಸಿವೆ. ಸದ್ಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಮಾತ್ರ ಸಮಸ್ಯೆ ಬಗೆಹರಿಯದು. ಬದಲಿಗೆ ವಿಶೇಷ ಒಂದು ವ್ಯವಸ್ಥೆಯಾಗಿ ಬಾಕಿ ಇರುವ ಕಡತಗಳನ್ನು ಪರಿಶೀಲಿಸಲು ತಂಡವನ್ನು ನೇಮಿಸಬೇಕು ಎಂದು ಸಂಬಂಧಪಟ್ಟವರು ಆಗ್ರಹಿಸಿರುವರು.
ಮಂಗಲ್ಪಾಡಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿಯಾಗಿದೆ. ಈ ಕಾರಣದಿಂದಾಗಿ, ಹಲವಾರು ಸಮಸ್ಯೆ-ಸವಾಲುಗಳು ದಿನನಿತ್ಯ ವರದಿಯಾಗುತ್ತಿವೆ. ಸಚಿವರಿಗೆ ಹಾಗೂ ಸ್ಥಳೀಯಾಡಳಿತ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಸ್ವತಃ ಗ್ರಾಮ ಪಂಚಾಯತಿ ಆಡಳಿತ ಸಮಿತಿಯು ನಡೆಸುತ್ತಿರುವ ಪ್ರತಿಭಟನಾ ಮುಷ್ಕರವನ್ನು ನಿರ್ಲಕ್ಷಿಸಿದರೆ, ಗ್ರಾಮ ಪಂಚಾಯತಿ ಮಟ್ಟದ ಆಂದೋಲನ ನಡೆಸಬೇಕಾಗುತ್ತದೆ ಎಂದು ಆಡಳಿತ ಮಂಡಳಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಗ್ರಾ.ಪಂ.ಅಧ್ಯಕ್ಷೆ ರುಬೀನಾ ನೌಫಲ್, ಉಪಾಧ್ಯಕ್ಷ ಯೂಸುಫ್ ಹೇರೂರು, ಸ್ಥಾಯೀ ಸಮಿತಿ ಅಧ್ಯಕ್ಷರಾದ ಖೈರುನ್ನೀಸಾ ಉಮರ್, ಮೊಹಮ್ಮದ್ ಹುಸೈನ್, ಸದಸ್ಯರಾದ ಮಜೀದ್ ಪಚ್ಚಂಬಳ, ಇರ್ಪಾನ ಇಕ್ಬಾಲ್, ಬಾಬು ಬಂದ್ಯೋಡು, ಕಿಶೋರ್ ಬಂದ್ಯೋಡು ಉಪಸ್ಥಿತರಿದ್ದು ಮಾತನಾಡಿದರು.

.jpg)
