ತಿರುವನಂತಪುರ: ಕೇರಳದ ಎಡರಂಗ ಸರ್ಕಾರದ ಬಗ್ಗೆ ಕಟುಟೀಕೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಈ ಸರ್ಕಾರವು ರಾಜ್ಯದಲ್ಲಿನ 'ತೀವ್ರವಾದ'ವನ್ನು ಉಪೇಕ್ಷಿಸಿದೆ ಎಂದು ದೂರಿದ್ದಾರೆ.
0
samarasasudhi
ಅಕ್ಟೋಬರ್ 31, 2023
ತಿರುವನಂತಪುರ: ಕೇರಳದ ಎಡರಂಗ ಸರ್ಕಾರದ ಬಗ್ಗೆ ಕಟುಟೀಕೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಈ ಸರ್ಕಾರವು ರಾಜ್ಯದಲ್ಲಿನ 'ತೀವ್ರವಾದ'ವನ್ನು ಉಪೇಕ್ಷಿಸಿದೆ ಎಂದು ದೂರಿದ್ದಾರೆ.
ಇಸ್ಲಾಮಿಕ್ ತೀವ್ರವಾದಿ ಸಂಘಟನೆ ಹಮಾಸ್‌ನ ನಾಯಕರೊಬ್ಬರು ಕೇರಳದಲ್ಲಿ ಕೆಲವು ದಿನಗಳ ಹಿಂದೆ ನಡೆದ ಸಭೆಯನ್ನು ಉದ್ದೇಶಿಸಿ ವರ್ಚುವಲ್ ವೇದಿಕೆಯ ಮೂಲಕ ಮಾತನಾಡಿದ್ದರು.
ಎಡರಂಗ ಸರ್ಕಾರವು ದುರಾಡಳಿತದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಕಾರ್ಯಕರ್ತರು ಕೇರಳ ಸಚಿವಾಲಯದ ಪ್ರವೇಶದ್ವಾರಗಳಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ನಡ್ಡಾ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಹಮಾಸ್ ವಿರುದ್ಧ ಇಸ್ರೇಲ್ ಸಾರಿರುವ ಯುದ್ಧವನ್ನು ವಿರೋಧಿಸಿ ಕೇರಳದ ಇಸ್ಲಾಮಿಕ್ ಸಂಘಟನೆಯೊಂದು ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿತ್ತು. ಹಮಾಸ್ ನಾಯಕ ಖಾಲೆದ್ ಮಶಾಲ್ ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಪಾಲ್ಗೊಂಡು ಮಾತನಾಡಿದ್ದನ್ನು ಉಲ್ಲೇಖಿಸಿ ನಡ್ಡಾ ಅವರು, 'ಮಶಾಲ್ ತನ್ನ ಸಂಘಟನೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾನೆ' ಎಂದು ದೂರಿದ್ದಾರೆ.
'ಇದರ ಅರ್ಥ ಏನು? ದೇವರ ಸ್ವಂತ ನಾಡು ಕೇರಳಕ್ಕೆ ನೀವು ಕೆಟ್ಟ ಹೆಸರು ತರುತ್ತಿದ್ದೀರಿ' ಎಂದು ಹೇಳಿದ ನಡ್ಡಾ ಅವರು, ಹೀಗೆ ಮಾಡುವುದಕ್ಕೆ ಅವಕಾಶ ಕೊಡಬಹುದೇ ಎಂದು ಅಲ್ಲಿ ಸೇರಿದ್ದವರನ್ನು ಪ್ರಶ್ನಿಸಿದ್ದಾರೆ. ಭಾನುವಾರ ಕೊಚ್ಚಿಯಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಉಲ್ಲೇಖಿಸಿ ನಡ್ಡಾ ಅವರು, 'ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ತೀವ್ರವಾದವನ್ನು ಉಪೇಕ್ಷಿಸಿದ ಕಾರಣಕ್ಕೆ ಶಾಂತಿಯುತ ರಾಜ್ಯದಲ್ಲಿ ಇಂತಹ ಘಟನೆ ನಡೆದಿದೆ' ಎಂದು ದೂರಿದ್ದಾರೆ.