ಕಾಸರಗೋಡು: ಜಿಲ್ಲೆಯಲ್ಲಿ ಹಾದು ಹೋಗುವ ಟ್ಯಾಂಕರ್ ಮತ್ತು ಟಿಪ್ಪರ್ ಲಾರಿಗಳ ಸಂಚಾರಕ್ಕೆ ಸಮಯ ಕ್ರಮೀಕರಣ ನಡೆಸುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ಯಾಂಕರ್ ಲಾರಿಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಸಂಚರಿಸಬೇಕು. ರಾಜ್ಯ ಹೆದ್ದಾರಿಗಳಲ್ಲಿ ದೂರ ಸಂಚರದ ಟ್ಯಾಂಕರ್‍ಗಳು ಸಂಚಾರ ನಡೆಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸಂಚಾರ ನಡೆಸುವ ಕಾಲಾವಧಿಯಲ್ಲಿ ಟಿಪ್ಪರ್ ಲಾರಿಗಳ ಸಂಚಾರಕ್ಕೆ ಅವಕಾಶ ನೀಡದಿರುವಂತೆಯೂ ಸೂಚಿಸಲಾಗಿದೆ. ಇದು ಗಮನಕ್ಕೆ ಬಂದರೆ ವಾಹನಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದರು. ಕಾನೂನು ಉಲ್ಲಂಘಿಸುವ ವಾಹನಗಳ ಪತ್ತೆಗೆ ಆರ್‍ಟಿಒ ತಪಾಸಣೆ ತೀವ್ರಗೊಳಿಸಲಿದೆ. ಈ ಬಗ್ಗೆ ದೈನಂದಿನ ವರದಿ ಸಲ್ಲಿಸುವಂತೆ ಆರ್‍ಟಿಒಗೆ ಜಿಲ್ಲಾಧಿಕಾರಿ ಸೂಚಿಸಿದರು.
ಹತ್ತಾರು ವರ್ಷಗಳಿಂದ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕಾಲನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಲು ಕಂದಾಯ ಹಾಗೂ ಸರ್ವೇ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಗಳು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಸಭೆಯಲ್ಲಿ ಶಾಸಕ ಇ.ಚಂದ್ರಶೇಖರನ್ ತಿಳಿಸಿದರು.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಾಗಾರ ನಿರ್ಮಾಣಕ್ಕೆ ಶೀಘ್ರವೇ ಎಸ್ಟಿಮೇಟ್ ಸಲ್ಲಿಸಿ ನಿವೇಶನದಲ್ಲಿರುವ ಮರಗಳನ್ನು ಕಡಿದು ತೆಗೆದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಕಟ್ಟಡ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಪರಿಶಿಷ್ಟ ಪಂಗಡದವರಿಗೆ ನಿವೇಶನ ಹಕ್ಕುಪತ್ರ ನೀಡುವ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕರಾದ ಎಂ.ರಾಜಗೋಪಾಲನ್, ಇ.ಚಂದ್ರಶೇಖರನ್, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಎಡಿಎಂ ಕೆ.ನವೀನ್ ಬಾಬು, ಆರ್.ಡಿಒ ಅತುಲ್ ಸ್ವಾಮಿನಾಥ್, ಸ್ಥಳೀಯಾಡಳಿತ ಇಲಾಖೆ ನಿರ್ದೇಶಕ ಜೇಸನ್ ಮ್ಯಾಥ್ಯೂ, ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.


