ಕೋಝಿಕ್ಕೋಡ್: ಸಾಕಷ್ಟು ದಾಖಲೆಗಳಿಲ್ಲದೆ ಅಬಕಾರಿ ಅಧಿಕಾರಿ ಸಂದೀಪ್ ನೈನ್ ಅವರನ್ನು ಕೇರಳ ಪೋಲೀಸರು ಕರೆದೊಯ್ದಿದ್ದಾರೆ ಎಂದು ದೂರಲಾಗಿದೆ.
ಸಂದೀಪ್ ಪತ್ನಿ ರೇಣು ದೂರು ದಾಖಲಿಸಿದ್ದಾರೆ. ಕೋಝಿಕ್ಕೋಡ್ ಪೆÇಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನ.12 ಗುರುವಾರ ನಡೆದಿದೆ.
ಬೆಳಗ್ಗೆ ಏಳು ಗಂಟೆಯ ನಂತರ ಅಧಿಕೃತ ಭವನಕ್ಕೆ ಆಗಮಿಸಿದ ಪೋಲೀಸ್ ಅಧಿಕಾರಿಗಳು ಸೂಕ್ತ ದಾಖಲೆ, ವಾರಂಟ್ ಇಲ್ಲದೇ ಶೋಧ ನಡೆಸಿ ಸಂದೀಪನನ್ನು ಕರೆದುಕೊಂಡು ಹೋಗಿದ್ದರು. ಸಂದೀಪ್ ನೈನ್ ಅವರು ಕೋಝಿಕ್ಕೋಡ್‍ನ ಕೇಂದ್ರ ತೆರಿಗೆ ಮತ್ತು ಕೇಂದ್ರ ಅಬಕಾರಿ ಕಮಿಷನರೇಟ್‍ನಲ್ಲಿ ಇನ್ಸ್‍ಪೆಕ್ಟರ್ ಆಗಿದ್ದಾರೆ.
ಪೋಲೀಸರು ಮನೆ ಪೂರ್ಣ ಶೋಧಿಸಿದರೂ ಏನೂ ಲಭಿಸಿಲ್ಲ. ನಂತರ ಸಮನ್ಸ್ ಅಥವಾ ವಾರಂಟ್ ಇಲ್ಲದೆಯೇ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿ ತನ್ನ ಪತಿಯನ್ನು ವಶಕ್ಕೆ ತೆಗೆದುಕೊಂಡರು. ಆದರೆ ಸಂದೀಪ್ ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ, ಯಾವ ಆರೋಪ ಹೊರಿಸಲಾಗಿದೆ ಎಂಬುದನ್ನು ತಿಳಿಸಿಲ್ಲ ಎಂದು ರೇಣು ಹೇಳಿದ್ದಾರೆ. ಘಟನೆಯಲ್ಲಿ ತಾನು ಮತ್ತು ತನ್ನ ಮಕ್ಕಳು ಮಾನಸಿಕವಾಗಿ ನೊಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೋಲೀಸರು ಸಂದೀಪ್ ಜೊತೆಗೆ ಅವರ ಕಾರನ್ನು ಕೊಂಡೊಯ್ದಿದ್ದಾರೆ. ಯಾವುದೇ ನಿರ್ದಿಷ್ಟ ಕಾರಣ ಅಥವಾ ದಾಖಲೆಗಳನ್ನು ತೋರಿಸದೆ ಪತಿಯ ವೈಯಕ್ತಿಕ ಮೊಬೈಲ್ ಪೋನ್ ಕೂಡ ಜಪ್ತಿ ಮಾಡಲಾಗಿದೆ. ಇದು ನಮ್ಮ ಖಾಸಗಿತನದ ಸ್ಪಷ್ಟ ಉಲ್ಲಂಘನೆ ಹಾಗೂ ಅಕ್ರಮ ಆಸ್ತಿ ವಶವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಬೆಳಿಗ್ಗೆ 10:30 ಕ್ಕೆ ಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೋನ್ ಬಂದಿತ್ತು ಎಂದು ಅವರ ಪತ್ನಿ ತಿಳಿಸಿದ್ದಾರೆ.
ಬಂಧನದಲ್ಲಿರುವಾಗಲೇ ಕುಸಿದು ಬಿದ್ದಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಆದರೆ ಪತಿ ಆರೋಗ್ಯವಾಗಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆಯಿಂದಾಗಿ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಘಟನೆಯ ಕುರಿತು ತೀವ್ರ ತನಿಖೆ ನಡೆಸುವಂತೆ ಸಂದೀಪ್ ಪತ್ನಿ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.





