ತಿರುವನಂತಪುರಂ: ರಾಜ್ಯದಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕಣ್ಣೂರು ಮತ್ತು ಕಾಸರಗೋಡು ಹೊರತುಪಡಿಸಿ ಎಂಟು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು.
ನಾಳೆಯೂ ಮಳೆ ಮುಂದುವರಿಯಲಿದೆ. ನಾಳೆ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಮಳೆಯ ಎಚ್ಚರಿಕೆ ನೀಡಲಾಗಿದೆ. ನೆಯ್ಯರ್ ಮತ್ತು ವಾಮನಪುರಂ ನದಿ ವ್ಯಾಪ್ತಿಯಲ್ಲಿ ಯೆಲ್ಲೋ ಅಲರ್ಟ್ ಹಾಗೂ ಕರಮಾನ ನದಿ ವ್ಯಾಪ್ತಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ವ್ಯಾಪಕ ಮಳೆ ಮುಂದುವರೆಯಲಿದೆ ಎಂದು ವರದಿಯಾಗಿದೆ. ಅರಬ್ಬಿ ಸಮುದ್ರದಲ್ಲೂ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಕರಾವಳಿ ತೀರದ ಜನರು ಜಾಗರೂಕರಾಗಿರಲು ಕೇಂದ್ರ ಜಲ ಆಯೋಗ ಸೂಚನೆ ನೀಡಿದೆ. ಕೇಂದ್ರ ಹವಾಮಾನ ಇಲಾಖೆ ಪ್ರಕಾರ, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.
ರಾಜಧಾನಿಯಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಎಲ್ಲಾ ಕಂದಾಯ ಅಧಿಕಾರಿಗಳಿಗೆ ಕಚೇರಿಗೆ ಆಗಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ಸಮನ್ವಯತೆ ಸಾಧಿಸುವಂತೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ತಾಲೂಕು ನಿಯಂತ್ರಣ ಕೊಠಡಿಗಳು ಸಂಪೂರ್ಣ ಸುಸಜ್ಜಿತವಾಗಿದ್ದು 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ತಾಲೂಕು ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನಾಳೆ ಶಿಬಿರ ನಡೆಯುವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.





