ಕೊಟ್ಟಾಯಂ: ಅಖಿಲ ಕೇರಳ ತಂತ್ರಿ ಸಮಾಜದ 41ನೇ ರಾಜ್ಯ ಸಮ್ಮೇಳನದ ಅಂಗವಾಗಿ ಕೊಟ್ಟಾಯಂನ ಸೂರ್ಯಕಾಲಡಿ ಮನೆಯಲ್ಲಿ ಸೌರ ಯಾಗವನ್ನು ನಡೆಸಲಾಯಿತು.
ಕೇರಳದ ಮಹಾದೇವಾಲಯಗಳ ಸುಮಾರು 30 ತಂತ್ರಿಗಳ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು. ಇಸ್ರೋ, ಕುಸಾಟ್ ಮತ್ತು ಅಮೃತಾ ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿಜ್ಞಾನಿಗಳು ಸೌರ ಯಜ್ಞದಲ್ಲಿ ಪಾಲ್ಗೊಂಡಿದ್ದರು.
25 ಹೋಮಕುಂಠಗಳನ್ನು ಸಿದ್ಧಪಡಿಸಲಾಗಿದ್ದು, ಭಾನುವಾರ ಬೆಳಗ್ಗೆ 5.30ರಿಂದ 8.30ರವರೆಗೆ ಹೋಮ ನಡೆಯಿತು. ಹೋಮದ ಸಮಯದಲ್ಲಿ ಗಾಳಿ ಮತ್ತು ಬೆಂಕಿಯಲ್ಲಿನ ಬದಲಾವಣೆಗಳನ್ನು ವಿಜ್ಞಾನಿಗಳು ವೈಜ್ಞಾನಿಕ ಉಪಕರಣಗಳನ್ನು ಬಳಸಿ ಸಂಗ್ರಹಿಸಿ ಅಧ್ಯಯನಕ್ಕೆ ದಾಖಲಿಸಿರುವರು. ರಾಷ್ಟ್ರದ ಹೆಮ್ಮೆಯ ವಿಜ್ಞಾನಿಗಳು ಸೌರ ಮಿಷನ್ ನಡೆಸುತ್ತಿರುವಾಗ ತಂತ್ರಿ ಸಮಾಜವು ಸಮಾನಾಂತರ ಆಧ್ಯಾತ್ಮಿಕ ಅನ್ವೇಷಣೆ ನಡೆಸುತ್ತಿದೆ ಎಂದು ಸೂರ್ಯಕಾಲಾಡಿ ಸೂರ್ಯ ಸುಬ್ರಮಣಿಯನ್ ಭಟ್ಟತ್ತಿರಿಪಾಡ್ ಹೇಳಿದರು.
ಇದೇ ವೇಳೆ ತಿರುವಾಂಕೂರು ರಾಜ ಪ್ರತಿನಿಧಿ ಪೂಯಂ ತಿರುನ್ನಾಳ್ ಗೌರಿ ಪಾರ್ವತಿಬಾಯಿ ತಂಬುರಾಟ್ಟಿ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ದೇವಸ್ವಂ ಮಂಡಳಿ ದೇವಸ್ಥಾನಗಳಲ್ಲಿ ಅರ್ಚಕರ ನೇಮಕಕ್ಕೆ ಪ್ರಮಾಣ ಪತ್ರ ನೀಡುವ ಸಾಂಪ್ರದಾಯಿಕ ತಂತ್ರಿ ಸಮಾಜದ ಅಧಿಕಾರವನ್ನು ರದ್ದುಪಡಿಸಲು ಸರ್ಕಾರ ಕೈಗೊಂಡ ತೀರ್ಮಾನ ಹಿಂತೆಗೆಯಲು ಮುಂದಾಗಬೇಕು ಎಂದು ಸಭೆಯಲ್ಲಿ ಮಂಡಿಸಿದ ನಿರ್ಣಯದಲ್ಲಿ ತಂತ್ರಿ ಸಮಾಜ ಆಗ್ರಹಿಸಿದೆ.





