ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು ತಾಯ್ನಾಡಿಗೆ ಮರಳುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ 'ಆಪರೇಷನ್ ಅಜಯ್' ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಬುಧವಾರ ಘೋಷಿಸಿದ್ದಾರೆ.
0
samarasasudhi
ಅಕ್ಟೋಬರ್ 12, 2023
ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು ತಾಯ್ನಾಡಿಗೆ ಮರಳುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ 'ಆಪರೇಷನ್ ಅಜಯ್' ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಬುಧವಾರ ಘೋಷಿಸಿದ್ದಾರೆ.
ಭಾರತೀಯರ ಮೊದಲ ತಂಡವನ್ನು ಹೊತ್ತ ವಿಶೇಷ ವಿಮಾನ ಗುರುವಾರ ಬಂದಿಳಿಯುವ ನಿರೀಕ್ಷೆ ಇದೆ. ಸದ್ಯ, ಶ್ರೀಲಂಕಾ ಪ್ರವಾಸದಲ್ಲಿರುವ ಅವರು, ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗ ಐದನೇ ದಿನವೂ ಮುಂದುವರಿದಿದೆ. ಅಲ್ಲದೇ, ಇಸ್ರೇಲ್ ಪಟ್ಟಣಗಳ ಮೇಲೆ ಹಮಾಸ್ ಹೊಸದಾಗಿ ದಾಳಿಗಳನ್ನು ಆರಂಭಿಸಿದ ಬೆನ್ನಲ್ಲೇ ಭಾರತ ಈ ಘೋಷಣೆ ಮಾಡಿದೆ.
'ಇಸ್ರೇಲ್‌ನಿಂದ ಮರಳಲು ಇಚ್ಛಿಸುವ ಭಾರತೀಯರಿಗೆ ನೆರವಾಗುವುದಕ್ಕೆ 'ಆಪರೇಷನ್ ಅಜಯ್' ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ವಿಶೇಷ ಖಾಸಗಿ ವಿಮಾನಗಳು ಹಾಗೂ ಇತರ ವ್ಯವಸ್ಥೆಗಳನ್ನು ಮಾಡಲಾಗಿದ್ದು, ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆಯನ್ನು ಖಾತರಿಪಡಿಸಲು ಬದ್ಧ' ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಗುರುವಾರ ಹೊರಡಲಿರುವ ವಿಶೇಷ ವಿಮಾನದ ಮೂಲಕ ಭಾರತಕ್ಕೆ ತೆರಳಿರುವ ಮೊದಲ ತಂಡದಲ್ಲಿರುವವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿದೆ' ಎಂದು ಇಸ್ರೇಲ್‌ನಲ್ಲಿರುವ ಭಾರತ ರಾಯಭಾರ ಕಚೇರಿ ಹೇಳಿದೆ.
'ಭಾರತಕ್ಕೆ ಮರಳಲು ನೋಂದಣಿ ಮಾಡಿಸಿಕೊಂಡಿರುವ ಇತರರಿಗೆ ಶೀಘ್ರವೇ ಮಾಹಿತಿ ನೀಡಲಾಗುತ್ತದೆ' ಎಂದು ರಾಯಭಾರ ಕಚೇರಿ 'ಎಕ್ಸ್'ನಲ್ಲಿ ಹೇಳಿದೆ. ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರು ಇದ್ದಾರೆ.