ಕೊಚ್ಚಿ: ಕೇರಳದ ಕೊಚ್ಚಿ ಸಮೀಪದ ಕಳಮಸ್ಸೆರಿಯಲ್ಲಿ ಭಾನುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಒಬ್ಬರು ಮೃತರಾಗಿ 23 ಮಂದಿ ಗಾಯಗೊಂಡಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ.
ಬೆಳಗ್ಗೆ 9.45ರ ಸುಮಾರಿಗೆ ಈ ಘಟನೆ ನಡೆದಿದೆ. ಯೆಹೋವನ ಸಾಕ್ಷಿಗಳ ದೇವಾಲಯ(ಯಹೂದಿ ಆರಾಧನಾಲಯ)ದಲ್ಲಿ ಈ ಸ್ಫೋಟ ಸಂಭವಿಸಿದೆ. ಪ್ರಾರ್ಥನಾ ವೇದಿಕೆಯ ಮಧ್ಯದಲ್ಲಿ ಸ್ಫೋಟ ಉಂಟಾಯಿತು ಎಂದು ವರದಿಯಾಗಿದೆ. ಸ್ಪೋಟದ ಶಬ್ದ ಭೀಕರವಾಗಿತ್ತೆಂದು ಸಮೀಪದಲ್ಲಿದ್ದವರು ಪ್ರತಿಕ್ರಿಯಿಸಿದ್ದಾರೆ.
ಕನ್ವೆನ್ಷನ್ ಸೆಂಟರ್‍ನೊಳಗೆ ಸಾಕಷ್ಟು ಜನರು ಸೇರಿದ್ದರು ಎಂದು ತಿಳಿದುಬಂದಿದೆ. ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಸ್ಫೋಟದಿಂದ ಕಟ್ಟಡ ನಲುಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಗಾಯಾಳುಗಳನ್ನು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಪ್ರಾರ್ಥನಾ ಸ್ಥಳದಲ್ಲಿ 2000ಕ್ಕೂ ಹೆಚ್ಚು ಜನ ಸೇರಿದ್ದರು. ವೇದಿಕೆಯ ಬಳಿ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಕೇಂದ್ರದ ಒಳಗಿದ್ದವರು ಹೇಳಿದ್ದಾರೆ. ಶುಕ್ರವಾರದಿಂದ ಅಲ್ಲಿ ಧಾರ್ಮಿಕ ಸಮ್ಮೇಳ ನಡೆಯುತ್ತಿದ್ದು, ಭಾನುವಾರ ಕೊನೆಯ ದಿನವಾಗಿತ್ತು. ಪ್ರಾರ್ಥನೆಯ ಸಮಯವಾದ್ದರಿಂದ ಎಲ್ಲರೂ ಕಣ್ಣು ಮುಚ್ಚಿ ನಿಂತಿದ್ದರು ಎನ್ನುತ್ತಾರೆ ಜನರು. ವರಪುಳ, ಅಂಗಮಾಲಿ, ಎಡಪಳ್ಳಿ ಸಹಿತ ಹಲವು ಪ್ಯಾರಿಷ್ ಗಳಿಂದ ಜನರು ಸಮಾವೇಶ ಕೇಂದ್ರಕ್ಕೆ ಆಗಮಿಸಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರಾದವರು ಮಹಿಳೆ ಎಂದು ತಿಳಿದುಬಂದಿದೆ.





