ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ಪ್ರಮುಖ ದೇವಾಲಯಗಳಲ್ಲಿ ಒಂದಾದ, ಮುಚುಕುಂದ ಋಷಿಗಳಿಂದ ಸ್ಥಾಪಿತಗೊಂಡಿರುವ ಮುಜುಂಗಾವು ಶ್ರೀ ಪಾರ್ಥಸಾರಥೀ ದೇವಸ್ಥಾನದ ಕೆರೆಯಲ್ಲಿ ತುಲಾ ಸಂಕ್ರಮಣದ ಅಂಗವಾಗಿ ಕಾವೇರಿ ತೀರ್ಥ ಸ್ನಾನ ಮಂಗಳವಾರ ಜರುಗಿತು. ಸಾವಿರಾರು ಮಂದಿ ಭಕ್ತಾದಿಗಳು ಶ್ರೀದೇವರ ಕೆರೆಯಲ್ಲಿ ಮಿಂದೆದ್ದು, ಪುನೀತರದರು. ಬೆಳಗ್ಗೆ ಸೀಮೆ ತಂತ್ರಿ ಗಣೇಶ ತಂತ್ರಿ ದೇಲಂಪಾಡಿ ನೇತೃತ್ವ ಹಾಗೂ ದೇವಸ್ಥಾನದ ಮುಖ್ಯ ಅರ್ಚಕ ಕಿಶೋರ್ ಅವರ ಪೌರೋಹಿತ್ಯದಲ್ಲಿ ಪ್ರಾರ್ಥನೆ ನಡೆಯಿತು. ನಂತರ ಮುಖ್ಯ ಅರ್ಚಕರು ಬೆಳ್ಳಿ ಕೊಡಪಾನದಲ್ಲಿ ಕೆರೆಯಿಂದ ತೆಗೆದ ತೀರ್ಥದ ನೀರನ್ನು ವದ್ಯಘೋಷಗಳೊಂದಿಗೆ ದೇವಾಲಯಕ್ಕೆ ತಂದು ಶ್ರೀದೇವರಿಗೆ ಅಭಿಷೇಕ ಮಾಡಿದ ನಂತರ ಬೆಳಗ್ಗೆ 4ರಿಂದ ತೀರ್ಥ ಸ್ನಾನ ಆರಂಭಗೊಂಡಿತು.
ಶುಚಿರ್ಭೂತರಗಿ ಆಗಮಿಸಿದ ಭಕ್ತರು ಕೆರೆಯಲ್ಲಿ ನಿಗದಿತ ಸ್ಥಳಗಳಲ್ಲಿ ನೀರಿನಲ್ಲಿ ಮುಳುಗೆದ್ದು, ಒದ್ದೆಬಟ್ಟೆಯಲ್ಲಿ ಕೆರೆಗೆ ಪ್ರದಕ್ಷಿಣೆ ಹಾಕುತ್ತಾ, ಬೆಳ್ತಿಗೆ ಅಕ್ಕಿ ಮತ್ತು ಹುರುಳಿ ಮಿಶ್ರಣವನ್ನು ಕೈಯಿಂದ ತಲೆಗೆ ಸುತ್ತುಹಾಕಿ ಕೆರೆಗೆ ಚೆಲ್ಲಿಕೊಂಡು ಸಾಗುತ್ತಾರೆ. ನಂತರ ಶುಭ್ರವಸ್ತ್ರ ಧರಿಸಿ, ಉಳಿದ ಅಕ್ಕಿ-ಹುರುಳಿಯನ್ನು ದೇವಸ್ಥಾನದ ಎದುರಿನ ಪಾತ್ರೆಗೆ ಹಾಕಿ ಶ್ರೀದೇವರಿಗೆ ನಮಸ್ಕರಿಸಿ ತೀರ್ಥ ಸ್ನಾನ ಪೂರೈಸುತ್ತಾರೆ. ತೀರ್ಥ ಸ್ನಾನದಿಂದ ಕೆಲವೊಂದು ಚರ್ಮವ್ಯಾಧಿಗಳು ವಾಸಿಯಾಗುತ್ತಿರುವುದಾಗಿ ಭಕ್ತಾದಿಗಳಲ್ಲಿ ನಂಬಿಕೆಯಿರುವುದರಿಂದ ಇಲ್ಲಿಗೆ ವಿಶೇಷ ಹರಿಕೆ ಹೊತ್ತು ಆಗಮಿಸುವವರಿದ್ದಾರೆ. ಕೆರೆಯ ಸುತ್ತು ಕೆಲವೊಂದು ಔಷದಿಯ ಗುಣವುಳ್ಳ ಸಸ್ಯಗಳ ಬೇರುಗಳು ನೀರಿನೊಳಗಿರುವುದಲ್ಲದೆ, ಅಕ್ಕಿ, ಹುರುಳಿ ಸಹಿತ ಧಾನ್ಯಗಳಿಂದಲೂ ನೀರಿನಲ್ಲಿ ಔಷಧೀಯ ಗುಣ ಹುಟ್ಟಿಕೊಳ್ಳುತ್ತಿರುವ ಬಗ್ಗೆ ವೈಜ್ಞಾನಿಕ ಹಿನ್ನೆಲೆಯೂ ಅಡಕವಾಗಿದೆ.
40ಸಾವಿರಕ್ಕೂ ಹೆಚ್ಚು ಭಕ್ತಾದಿಗಳು:
ಮುಜುಂಗಾವು ತೀರ್ಥ ಸ್ನಾನಕ್ಕೆ ಕಾಸರಗೋಡು ಅಲ್ಲದೆ ನೆರೆಯ ಕಣ್ಣೂರು, ದ.ಕ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ಬೆಳಗ್ಗೆ 4ರಿಂದ ಮಧ್ಯಾಹ್ನ 2.30ರ ವರೆಗೂ ತೀರ್ಥ ಸ್ನಾನ ಮುಂದುವರಿದಿತ್ತು. ಬೆಳಗ್ಗೆ 11.30ರಿಂದಲೇ ಭೋಜನ ಆರಂಭಗೊಂಡಿದ್ದು, 25ಸಾವಿರಕ್ಕೂ ಹೆಚ್ಚು ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು. ಪೊಲೀಸ್, ಅಗ್ನಿಶಾಮಕ ದಳ ಹಾಗೂ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.




