ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಬಿಲಾಸ್‌ಪುರದಿಂದ ರಾಯಪುರದವರೆಗೆ ಕೈಗೊಂಡಿದ್ದ ರೈಲ್ವೆ ಪ್ರಯಾಣ ವೇಳೆ ಪ್ರಯಾಣಿಕರೊಂದಿಗೆ ನಡೆಸಿದ ಸಂವಾದದ ಕುರಿತ ವಿಡಿಯೊವನ್ನು ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
'ತಮ್ಮ ಆಟದ ಸೂಕ್ಷ್ಮಗಳ ಕುರಿತು ಚರ್ಚಿಸಿದ ಟೆಬಲ್ ಟೆನಿಸ್ ಆಟಗಾರ್ತಿಯರ, ಗೀತೆ ಗಾಯನದಲ್ಲಿ ತೊಡಗಿದ್ದ ಯುವತಿಯರು ಹಾಗೂ ಜಾತಿ ತಾರತಮ್ಯದ ಕುರಿತು ತಮ್ಮ ವಿಚಾರ ಹಂಚಿಕೊಂಡ ಕಲಾವಿದೆ... ಹೀಗೆ ಹಲವು ಬಗೆಯ 'ನೈಜ ಭಾರತ'ದ ದರ್ಶನ ಈ ಪ್ರಯಾಣದ ಅವಧಿಯಲ್ಲಿ ರಾಹುಲ್ ಅವರಿಗೆ ಆಗಿದೆ ಅದು ತಿಳಿಸಿದೆ.
ಸೆಪ್ಟೆಂಬರ್ 25ರಂದು ಛತ್ತೀಸಗಢಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು. ಎರಡು ಗಂಟೆಗಳ ಈ ಪ್ರಯಾಣ ಕುರಿತ 13 ನಿಮಿಷಗಳ ವಿಡಿಯೊವನ್ನು ಕಾಂಗ್ರೆಸ್ ಮಂಗಳವಾರ ಹಂಚಿಕೊಂಡಿದೆ.
'ಭಾರತ್ ಜೋಡೊ ಯಾತ್ರೆಯ ಮುಂದುವರಿದ ಭಾಗ ಇದಾಗಿದ್ದು, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ದೇಶವನ್ನು ಒಗ್ಗೂಡಿಸಲು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ' ಎಂದು ಕಾಂಗ್ರೆಸ್ ಬಣ್ಣಿಸಿದೆ.
'ಕೋಟ್ಯಂತರ ಜನರನ್ನು ತಮ್ಮ ಗಮ್ಯ ಸ್ಥಾನಗಳಿಗೆ ಕಳುಹಿಸುವ ರೈಲ್ವೆಯು ದೇಶದ ವೈವೀಧ್ಯತೆಯನ್ನು ಮತ್ತು ನೈಜ ಭಾರತವನ್ನು ಪ್ರತಿಬಿಂಬಿಸುತ್ತದೆ' ಎಂದು ರಾಹುಲ್ ಗಾಂಧಿ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ತಿಳಿಸಿದ್ದಾರೆ.
'ರೈಲ್ವೆಯು ಭಾರತದ ಜೀವನಾಡಿಯಾಗಿದ್ದು, ಇದರಲ್ಲಿ ನಿತ್ಯ ಸುಮಾರು ಒಂದು ಕೋಟಿ ಜನರು ಪ್ರಯಾಣಿಸುತ್ತಾರೆ. ರೈಲಿನಲ್ಲಿ ನೈಜ ಭಾರತದ ನೋಟ ಕಂಡು ಬರುತ್ತದೆ. ಅಪರಿಚತರಾಗಿ ಪ್ರಯಾಣ ಆರಂಭಿಸುವ ವಿಭಿನ್ನ ಧರ್ಮ, ಭಾಷೆ ಮತ್ತು ವರ್ಗಗಳ ಜನರು ಪ್ರಯಾಣದ ಅವಧಿಯಲ್ಲಿ ಒಗ್ಗೂಡುತ್ತಾರೆ. ಅಲ್ಲಿ ಪ್ರೀತಿ ಹಂಚಿಕೆಯಾಗುತ್ತದೆ. ಈ ಮೂಲಕ ಭಾರತ ಒಗ್ಗೂಡತ್ತದೆ' ಎಂದು ರಾಹುಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಪ್ರಕಟಣೆ ಹೊರಡಿಸಿದೆ.
ಬಿಲಾಸ್‌ಪುರದಿಂದ ರಾಯಪುರದವರಗಿನ ಪ್ರಯಾಣ ಸ್ಮರಣೀಯವಾದದ್ದು ಎಂದು ಬಣ್ಣಿಸಿರುವ ರಾಹುಲ್, ಛತ್ತೀಸಗಢದ ಅನೇಕ ಮಹತ್ವಾಕಾಂಕ್ಷಿ ಯುವ ಜನರನ್ನು ಈ ಅವಧಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದೆ. ಅವರ ಕಂಗಳಲ್ಲಿ ಅನೇಕ ಕನಸುಗಳಿದ್ದವು. ಅವುಗಳು ಈಡೇರುತ್ತವೆ ಎಂಬು ವಿಶ್ವಾಸ ಅವರಲ್ಲಿತ್ತು ಎಂದು ರಾಹುಲ್ ಹೇಳಿದ್ದಾರೆ.





