ಗಾಜಾ ಪಟ್ಟಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ದ ಪ್ರಾರಂಭವಾಗಿ ಇಂದಿಗೆ 29 ದಿನ ಕಳೆದಿದ್ದು, ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ಶನಿವಾರ ತಡರಾತ್ರಿ ಸೆಂಟ್ರಲ್ ಗಾಜಾದ ಶಿಬಿರವೊಂದರ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಸುಮಾರು 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ತಿಳಿಸಿದೆ.
'ಸೆಂಟ್ರಲ್ ಗಾಜಾ ಪಟ್ಟಿಯಲ್ಲಿರುವ ಅಲ್-ಮಘಾಝಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ದೇರ್ ಅಲ್-ಬಾಲಾಹ್ನಲ್ಲಿರುವ ಅಲ್-ಅಕ್ಸಾ ಮಾರ್ಟಿಯರ್ಸ್ ಆಸ್ಟತ್ರೆಗೆ ರವಾನಿಸಲಾಗಿದೆ' ಎಂದು ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ತಿಳಿಸಿದ್ದಾರೆ.
ವೈಮಾನಿಕ ದಾಳಿಗೆ ಹಲವು ಮನೆಗಳು ನೆಲಸಮಗೊಂಡಿವೆ ಎಂದು ತಿಳಿಸಿದ್ದಾರೆ.
ಯುದ್ಧದಿಂದ ಗಾಜಾದಲ್ಲಿ ಇದುವರೆಗೆ ಸುಮಾರು 9,227 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಪರಿಹಾರ ಕಾರ್ಯದಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ 72 ಮಂದಿಯೂ ಮೃತಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಕದನ ವಿರಾಮ ನಿರ್ಣಯವನ್ನು ಇಸ್ರೇಲ್ ತಿರಸ್ಕರಿಸಿದೆ. ಹಮಾಸ್ ಬಂಡುಕೋರರನ್ನು ಸಂಪೂರ್ಣ ನಾಶ ಮಾಡುವುದೇ ಇಸ್ರೇಲ್ ಗುರಿ ಎಂದು ಪುನರುಚ್ಛರಿಸಿದೆ.