ಕಾಸರಗೋಡು: ಸರೋವರ ದೇವಾಲಯ ಅನಂತಪುರ ಶ್ರಿ ಅನಂತಪದ್ಮನಾಭ ಸ್ವಾಮಿ ದೇವಾಲಯದ ಕೆರೆಯಲ್ಲಿ ಬಬಿಯಾ ಮೊಸಳೆಯ ಸಾವಿನ ಒಂದು ವರ್ಷ ಒಂದು ತಿಂಗಳ ನಂತರ ಮತ್ತೊಂದು ಮೊಸಳೆ ಕಾಣಿಸಿಕೊಂಡಿದ್ದು, ದೈವಸ್ವರೂಪಿ ಮೊಸಳೆಗೆ ನೈವೇದ್ಯ ಸಮರ್ಪಣೆ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಬಗ್ಗೆ ಸಮಾಲೋಚನೆ ನಡೆಯುತ್ತಿರುವುದಾಗಿ ಮಲಬಾರ್ ದಏವಸ್ವಂ ಬೋರ್ಡ್ ನೇಮಕಾತಿ ನಡೆಸಿರುವ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಪಿ ರಾಮನಾಥ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ನ. 11ರಂದು ದೇವಾಲಯ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಕೆಲವೊಂದು ಸಮಯದಲ್ಲಿ ಭಕ್ತಾದಿಗಳಿಗೆ ದರ್ಶನ ನೀಡುತ್ತಿದೆ. ದೇವಸ್ಥಾನದ ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿ ಹಾಗೂ ದೈವಜ್ಞರೊಂದಿಗೆ ಸಮಾಲೋಚನೆ ನಡೆಸಿ, ದೇವಸ್ವಂ ಬೋರ್ಡ್, ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಾದಿಗಳು ಒಟ್ಟಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. 1947ರಲ್ಲಿ ಬ್ರಿಟಿಷ್ ಸೇನಾಧಿಕಾರಿ ಇಲ್ಲಿನ ಮೊಸಳೆಯನ್ನು ಗುಂಡಿಟ್ಟು ಸಾಯಿಸಿದ ನಂತರ ಬೇರೊಂದು ಮೊಸಳೆ ಇಲ್ಲಿ ಕಾಣಿಸಿಕೊಂಡಿದ್ದು, ಬಬಿಯಾ ಹೆಸರಲ್ಲಿ ಭಕ್ತಾದಿಗಳಿಗೆ ದರ್ಶನ ನೀಡುತ್ತಾ ಬಂದಿದ್ದು 2022 ಅ. 9ರಂದು ಸಾವಿಗೀಡಾಗಿತ್ತು. ಇದಾದ ಒಂದು ವರ್ಷ ಒಂದು ತಿಂಗಳ ನಂತರ ಮತ್ತೊಂದು ಮೊಸಳೆ ಕಾಣಿಸಿಕೊಂಡಿದೆ. ಈ ಮೂಲಕ ಒಂದರ ಕಾಲಾನಂತರ ಮತ್ತೊಂದು ಮೊಸಳೆ ಇಲ್ಲಿ ಪ್ರತ್ಯಕ್ಷಗೊಳ್ಳುತ್ತಿರುವುದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದರು.
ಮೊಸಳೆ ಬಗ್ಗೆ ವದಂತಿ:
ದೇವಾಲಯದ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವ ಬಗ್ಗೆ ವಿವಿಧೆಡೆ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ದೇವಾಲಯದ ಕೆರೆಗೆ ಮೊಸಳೆಯನ್ನು ತಂದು ಬಿಡಲಾಗಿದೆ ಎಂಬ ರೀತಿಯಲ್ಲಿ ವದಂತಿ ಹರಡಿಸಲಾಗುತ್ತಿದ್ದು, ಇದು ಅಪ್ಪಟ ಸುಳ್ಳು ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ತಿಳಿಸಿದ್ದಾರೆ.
ದೇವಸ್ಥಾನದ ಸುತ್ತು 16 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇವೆಲ್ಲವೂ ಕಾರ್ಯಪ್ರವೃತ್ತವಾಗಿದೆ. ದೇವಸ್ವಂ ಬೋರ್ಡ್ ಅನುಮತಿಯೊಂದಿಗೆ ಇವುಗಳ ತಪಾಸಣೆ ನಡೆಸಬಹುದಾಗಿದೆ. ಭಕ್ತಜನರ ವಿಶ್ವಾಸಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಮೊಸಳೆ ಕಾಣಿಸಿಕೊಂಡ ನಂತರದ ದಿವಸಗಳಲ್ಲಿ ದೇವಾಲಯಕ್ಕೆ ಭಕ್ತದ ದಟ್ಟಣೆ ಹೆಚ್ಚಾಗಿದೆ. ಕೆಲವೊಂದು ಭಕ್ತರಿಗೆ ಮೊಸಳೆ ದರ್ಶನವೂ ಆಗುತ್ತಿದೆ. ಬಹುತೇಕ ಹೊತ್ತು ಗುಹಾಭಾಗದ ನೀರಿನೊಳಗಿರುವುದರಿಂದ ನಿರಂತರ ದರ್ಶನ ಸಾಧ್ಯವಾಗುತ್ತಿಲ್ಲ. ಬೆಳಗ್ಗೆ 8.30ಕ್ಕೆ ಹಾಗೂ ಮಧ್ಯಾಹ್ನ 12.30ಕ್ಕೆ ನೈವೇದ್ಯವನ್ನು ಇಲ್ಲಿ ಮೊಸಳಗೆ ಸಮರ್ಪಿಸುವುದು ವಾಡಿಕೆ. ಮೊಸಳೆ ಕೆರೆಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಕಾನೂನು ಪ್ರಕಾರ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿದೆ. ತಂತ್ರಿವರ್ಯದ ನಿರ್ದೇಶ ಪ್ರಕಾರ ನೈವೇದ್ಯ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ. ಮಾಧವ ಕಾರಂತ, ಗ್ರಾಮ ಪಂಚಾಯಿತಿ ಸದಸ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜನಾರ್ದನ ಪೂಜಾರಿ ಕಣ್ಣೂರು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕುಶಾಲಪ್ಪ ಉಪಸ್ಥಿತರಿದ್ದರು.



.jpg)
